ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 5ನೇ ವರದಿಯನ್ನು ಸಮಿತಿ ಅಧ್ಯಕ್ಷ ಎಂ ಪಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.
ಅನುಸೂಚಿತ ಜಾತಿ, ಪಂಗಡಕ್ಕೆ ಸೇರಿದವರು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಸರ್ಕಾರಗಳು ವಿವಿಧ ಯೋಜನೆಯಡಿ ಕೋಟ್ಯಂತರ ಹಣ ವೆಚ್ಚ ಮಾಡುತ್ತಿವೆ. ಈ ಕಾರ್ಯಕ್ರಮಗಳಡಿ ಆ ಸಮುದಾಯಗಳಿಗೆ ಮೂಲಸೌಲಭ್ಯ ಒದಗಿಸಲಾಗಿದೆಯೇ ಅಥವಾ ಇಲ್ಲವೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ, ಸಮಿತಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದೆ.
ಲೋಕೋಪಯೋಗಿ, ಕೃಷಿ, ಗ್ರಾಮೀಣಾಭಿವೃದ್ಧಿ, ವಾಣಿಜ್ಯ, ಕೈಗಾರಿಕೆ, ಉನ್ನತ ಶಿಕ್ಷಣ, ಕಂದಾಯ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕೆಲವು ಭೂಮಿಗಳ ಪರಭಾರೆ ನಿಷೇಧ ಕಾಯ್ದೆ 1978ಕ್ಕೆ ಸಂಬಂಧಿಸಿದಂತೆ ಮತ್ತು ಪಶುಸಂಗೋಪನೆ, ಮೀನುಗಾರಿಕೆ ಹಾಗೂ ವಸತಿ ಇಲಾಖೆಗಳಿಗೆ ಸಂಬಂಧಿಸಿದಂತೆ ಈ ವರದಿ ಸಲ್ಲಿಕೆಯಾಗಿದೆ.
ಇದನ್ನೂ ಓದಿ: ಕಂದಾಯ ಇಲಾಖೆ ದಾಖಲೆ ತಿದ್ದಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್.. ಸಚಿವ ಗೋವಿಂದ ಕಾರಜೋಳ
ಕೆಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಿತಿ ಶಿಫಾರಸು ಮಾಡಲಾಗಿದೆ. ಮತ್ತೆ ಕೆಲವು ಇಲಾಖೆಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಯ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಮಿತಿಯ ಪ್ರಮುಖ ಶಿಫಾರಸುಗಳೇನು?: ಸರ್ಕಾರದ ಮಟ್ಟದಲ್ಲಿ ಹೊರಗುತ್ತಿಗೆ ನೇಮಕದಲ್ಲಿ ಎಲ್ಲ ವೃಂದ ಹಾಗೂ ಮೀಸಲಾತಿ ಕಡ್ಡಾಯವಾಗಿ ಪಾಲಿಸಬೇಕು. ಈ ಸಂಬಂಧ ನಿರ್ದಿಷ್ಟ ಆದೇಶ/ಕಾನೂನು ರಚಿಸಬೇಕು. ಮೀಸಲು ಕ್ಷೇತ್ರಗಳಿಗೆ ಆದ್ಯತೆ ಮೇಲೆ ಹೆಚ್ಚು ಅನುದಾನ ನೀಡಬೇಕು.
ಕೃಷಿ ಭಾಗ್ಯ ಯೋಜನೆಯನ್ನು ಪುನಾರಂಭಿಸಲು ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಪಿಎಚ್‌ಡಿ, ಎಂಫಿಲ್ ಮಾಡುತ್ತಿರುವ ಅನುಸೂಚಿತ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ ಹೆಚ್ಚುವರಿ ಅನುದಾನ ಪಡೆದು ಪ್ರತಿ ವಿದ್ಯಾರ್ಥಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ಮಾಸಿಕ 10 ಸಾವಿರ ರೂ. ನೀಡಬೇಕು.