ಬೆಂಗಳೂರು: ವಿವಾದಿತ ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ವಿಧೇಯಕ ಸೇರಿ 12 ವಿಧೇಯಕಗಳು ವಿಧಾನಸಭೆಯಲ್ಲಿ ಇಂದು ಮಂಡನೆಯಾಗಿವೆ. ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 2020ನೇ ಸಾಲಿನ ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದ 2020ನೇ ಸಾಲಿನ ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕವು 1961ರ (ಅಧಿನಿಯಮ (10) 79ಎ, 79ಬಿ, 79 ಸಿ ಪ್ರಕರಣಗಳನ್ನು ಬಿಟ್ಟುಬಿಡುವ ಪ್ರಸ್ತಾಪ ಮಾಡಲಾಗಿದೆ. ಎ ವರ್ಗದ ನೀರಾವರಿ ಭೂಮಿಯು ಕೃಷಿ ಉದ್ದೇಶಕ್ಕೆ ಮಾತ್ರ ಮಾರಾಟ ಮಾಡುವ ಪ್ರಸ್ತಾಪ ಮಾಡಲಾಗಿದೆ.
ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಮೂಲಕ ಪ್ರಾರಂಭಿಕ ವಿಚಾರಣೆ ಮತ್ತು ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ವರದಿಗಳನ್ನು ಸಲ್ಲಿಸಲು ಕುಂದು ಕೊರತೆಗಳು ಅಥವಾ ದೂರುಗಳ ಶೀಘ್ರ ವಿಲೇವಾರಿಗಾಗಿ ಕರ್ನಾಟಕ ಲೋಕಾಯುಕ್ತವನ್ನು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಸಾಧ್ಯವಾಗಿಸಲು ಸಮಯದ ಚೌಕಟ್ಟನ್ನು ಅಳವಡಿಸಲು ವಿಧೇಯಕದಲ್ಲಿ ತಿದ್ದುಪಡಿ ಪ್ರಸ್ತಾಪ ಮಾಡಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 2020ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ವಿಧೇಯಕ ಮಂಡಿಸಿದರು.
ಈ ವಿಧೇಯಕವು ಮಾಸ್ಟರ್ ಪ್ಲಾನ್‍ಗಳನ್ನು ಸಿದ್ದಪಡಿಸುವುದರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಖಚಿತ ಪಡಿಸಿಕೊಳ್ಳಲು ಹಾಗೂ ವಾರ್ಡ್ ಮಟ್ಟದಲ್ಲಿ ಭೂ ಕಬಳಿಕೆ ನಕಾಶೆಗಳನ್ನು ಸಿದ್ದಪಡಿಸಲು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ 1961ತಿದ್ದುಪಡಿ ಮಾಡುವ ಪ್ರಸ್ತಾಪ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ 2020ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸಾರ್ವಜನಿಕ ಸೇವೆಗೆ ವಿಲೀನಗೊಳಿಸುವುದಕ್ಕೆ ನಿಷೇಧ) ವಿಧೇಯಕವು ರಾಜ್ಯ ಸಿವಿಲ್ ಸೇವೆಗಳಿಗೆ ಸಾರ್ವಜನಿಕ ವಲಯದ ಉದ್ಯಮಗಳ ನೌಕರರ ವಿಲೀನ ತಡೆಯುವುದಕ್ಕಾಗಿ ತಿದ್ದುಪಡಿ ತರುವುದು ಅವಶ್ಯಕವೆಂದು ಪರಿಗಣಿಸುವ ಪ್ರಸ್ತಾಪ ಮಾಡಲಾಗಿದೆ.
ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮಂಡಿಸಿದ 2020ನೇ ಸಾಲಿನ ಕರ್ನಾಟಕ ಭಿಕ್ಷಾಟನೆ ನಿಷೇಧ ತಿದ್ದುಪಡಿ ವಿಧೇಯಕವು ಕುಷ್ಠರೋಗ ಬಾಧಿತ ವ್ಯಕ್ತಿಗಳ ಸಂಬಂಧದಲ್ಲಿನ ತಾರತಮ್ಯಕಾರಕವಾದ ಉಪಬಂಧವನ್ನು ತೆಗೆದು ಹಾಕುವ ಪ್ರಸ್ತಾಪ ಮಾಡಲಾಗಿದೆ. ಉಪಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು ಮಂಡಿಸಿದ ಕನ್ನಡ ವಿಶ್ವವಿದ್ಯಾಲಯ ಮತ್ತು ಇತರೆ ಕೆಲವು ಕಾನೂನುಗಳ ತಿದ್ದುಪಡಿ ವಿಧೇಯಕವು ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಅಧಿನಿಯಮ 2009 ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಅಧಿನಿಯಮ 2009ಕ್ಕೆ ತಿದ್ದುಪಡಿ ತರುವ ಪ್ರಸ್ತಾವ ಮಾಡಲಾಗಿದೆ.
2020ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವು ಆದಾಯ ತೆರಿಗೆ ವಿನಾಯ್ತಿಗಳ ಪ್ರಯೋಜನವನ್ನು ಬಳಸಿಕೊಳ್ಳಲು ಮುಕ್ತ ವಿಶ್ವವಿದ್ಯಾಲಯ ನೋಂದಣಿ ಮಾಡಿಕೊಳ್ಳುವ ಹಾಗೂ ರಾಜ್ಯ ಲೆಕ್ಕಪತ್ರಗಳ ನಿಯಂತ್ರಕ ಎಂಬ ಪದ ನಾಮವನ್ನು ಪ್ರಧಾನ ನಿರ್ದೇಶಕರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಎಂದು ಬದಲಿಸುವ ಪ್ರಸ್ತಾವ ಮಾಡಲಾಗಿದೆ.
ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಂಡಿಸಿದ 2020ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನ, ಭತ್ಯೆಯ ಹಾಗೂ ಇತರೆ (ತಿದ್ದುಪಡಿ) ಕಾನೂನು ತಿದ್ದುಪಡಿ ವಿಧೇಯಕವು ಕೋವಿಡ್-19 ಸಾಂಕ್ರಾಮಿಕ ರೋಗವು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಲುವುದು ಅವಶ್ಯಕವಾಗಿದೆ. ಇಂತಹ ಸನ್ನಿವೇಶನವನ್ನು ನಿಭಾಯಿಸಲು ಮುಖ್ಯಮಂತ್ರಿಗಳು, ಸಚಿವರು, ಉಪಮುಖ್ಯಮಂತ್ರಿ, ಸಭಾಪತಿ, ಉಪಸಭಾತಿ, ಸಭಾಧ್ಯಕ್ಷ, ಉಪ ಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಸರ್ಕಾರದ ಮುಖ್ಯ ಸಚೇತಕ, ವಿರೋಧ ಪಕ್ಷದ ಮುಖ್ಯ ಸಚೇತಕ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಸಂಬಳ ಮತ್ತು ಭತ್ಯೆ ಕಡಿಮೆಗೊಳಿಸುವ ಮೂಲಕ ಸಂಪನ್ಮೂಲವನ್ನು ಹೆಚ್ಚಿಸುವ ಪ್ರಸ್ತಾಪ ಈ ವಿಧೇಯಕದಲ್ಲಿ ಮಾಡಲಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಂಡಿಸಿದ 2020ನೇ ಸಾಲಿನ ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ ತಿದ್ದುಪಡಿ ) ವಿಧೇಯಕವು ವಾಣಿಜ್ಯ ಕಾರ್ಯಾಚಣೆ ಆರಂಭಕ್ಕೆ ಮೊದಲು ಅಂತಿಮ ಅನುಮೋದನೆಯನ್ನು ಪಡೆದುಕೊಳ್ಳುವ ಉದ್ದೇಶವನ್ನು ಪ್ರಸ್ತಾಪಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು 2020ನೇ ಸಾಲಿನ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವು ಬಿಬಿಎಂಪಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತ್ಯೇಕ ನೋಂದಣಿ ಮತ್ತು ಕುಂದು ಕೊರತೆ ನಿವಾರಣಾ ಪ್ರಾಧಿಕಾರ ಹಾಗೂ ಅಫೀಲು ಪ್ರಾಧಿಕಾರಕ್ಕಾಗಿ ಉಪಬಂಧಗಳನ್ನು ಕಲ್ಪಿಸಲು , ಕೋವಿಡ್ -19ರ ಪ್ರಕರಣಗಳನ್ನು ಸಂಪೂರ್ಣವಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಮಾಡಲಾಗಿದೆ.
2020ನೇ ಸಾಲಿನ ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕವು ಸಾರ್ವಜನಿಕ ಮತ್ತು ಖಾಸಗಿ ಸ್ವತ್ತಿಗೆ ಹಾನಿ ಉಂಟು ಮಾಡುವುದನ್ನು ನಿಷೇಧಿಸಲು ಹಾಗೂ ನಷ್ಟವನ್ನು ವಸೂಲು ಮಾಡಲು ಪ್ರಸ್ತಾಪ ಮಾಡಲಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಸಂಬಂಧಿಸಿದ ಕಾರ್ಯವನ್ನು ನಿರ್ವಹಿಸುವ ಸಾರ್ವಜನಿಕ ನೌಕರರಿಗೆ ಅಡಚಣೆ ಉಂಟು ಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ. ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ 2020ನೇ ಸಾಲಿನ ಕರ್ನಾಟಕ ಪುರಸಭೆಯಗಳ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.