ಬೆಂಗಳೂರು: ವೈಕುಂಠ ಏಕಾದಶಿ ಈ ಬಾರಿ ಸರಳವಾಗಿ ನಡೆಯಲಿದೆ. ಆದರೆ ಕೋಟೆ ವೆಂಕಟರಮಣಸ್ವಾಮಿ ದೇವಾಲಯ ಸೇರಿದಂತೆ ನಗರದ ಪ್ರಮುಖ ವೆಂಕಟೇಶ್ವರನ ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.
ನಗರದ ವೈಯಾಲಿಕಾವಲ್ ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಏಕಾದಶಿಗೆ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಸ್ವರ್ಗದ ಬಾಗಿಲನ್ನ ನಿರ್ಮಿಸಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಲು ಅವಕಾಶ ಮಾಡಿಕೊಡಬಾರದು ಎಂದು ಮುಜರಾಯಿ ಇಲಾಖೆ ಸೂಚಿಸಿದ ಹಿನ್ನೆಲೆ ಸಾರ್ವಜನಿಕರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪ್ರವೇಶವನ್ನ ಕಲ್ಪಿಸಲಾಗುತ್ತದೆ.
ಓದಿ: ನಿರುದ್ಯೋಗ, ಕಡಿಮೆ ಸಂಪಾದನೆ ಜೀವನಾಂಶ ನೀಡದಿರಲು ಕಾರಣವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಏಕಾದಶಿ ನಿಮಿತ್ತ ಭಕ್ತಾದಿಗಳಿಗೆ ನಾಳೆಯಿಂದ ಜನವರಿ 3ರ ವರೆಗೆ ಜನರಲ್, ಪಬ್ಲಿಕ್, ವಿಐಪಿ ಹಾಗೂ ವಿನಾಯಿತಿ ಅಂತ ಪ್ರತ್ಯೇಕ ಪ್ರವೇಶ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಗ್ಗೆ 11ರಿಂದ 11.30 ಹಾಗೂ ಸಂಜೆ 4ರಿಂದ 4:45 ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ತಿರುಪತಿಯಲ್ಲಿ ಆಯೋಜನೆ ಮಾಡಿರುವಂತೆ ಬೆಂಗಳೂರಿನ ದೇವಸ್ಥಾನದಲ್ಲಿ ಹತ್ತುದಿನಗಳ ಕಾಲ ವೈಕುಂಠ ಏಕಾದಶಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಹತ್ತು ದಿನಗಳ ಕಾಲ ವೈಕುಂಠ ದ್ವಾರ ತೆರೆದಿರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ. ಸುಮಾರು 150ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಳೆಯಿಂದ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.