ಬೆಂಗಳೂರು: ಫೆಬ್ರವರಿ 7,8,9 ರಂದು ಬೀದರ್‌ನಲ್ಲಿ ನಡೆಯಲಿರುವ ಮೂರು ದಿನಗಳ ಪಶು ಮೇಳದ ಸಿದ್ಧತೆಗಳ ಕುರಿತಾಗಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸೋಮವಾರ ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ಈ ವೇಳೆ ಸಚಿವರು ಅಧಿಕಾರಿಗಳಿಗೆ ಕೆಲ ಖಡಕ್ ಸೂಚನೆಗಳನ್ನು ನೀಡಿದರು. ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಪಶು ಮೇಳವನ್ನು ಆಯೋಜಿಸಬೇಕು ಎಂದು ಸ್ಪಷ್ಟವಾಗಿ ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಮೇಳವನ್ನು ಸಿಎಂ ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದು, ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಸುಗಳನ್ನು ಮೇಳದಲ್ಲಿ ತರುವವರಿಗೆ ಊಟ, ವಸತಿಯ ವ್ಯವಸ್ಥೆ, ರಾಸುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ, ಮನರಂಜನೆ ಕಾರ್ಯಕ್ರಮ ಹಾಗೂ ವಿಚಾರ ಗೋಷ್ಠಿ ಸೇರಿ ಹಲವು ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ದೊಡ್ಡ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಬೀದರ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ತರಹದ ಅಚಾತುರ್ಯಗಳು ನಡೆಯದಂತೆ ಅಧಿಕಾರಿಗಳಿಗೆ ಎಚ್ಚರ ವಹಿಸಲು ಹೇಳಿದರು. ಫೆಬ್ರವರಿ 1 ರಿಂದಲೇ ಎಲ್ಲಾ ಅಧಿಕಾರಿಗಳು ಬೀದರ್‌ನಲ್ಲಿ ಹಾಜರಿದ್ದು, ಪಶು ಮೇಳದ ಎಲ್ಲ ಸಿದ್ಧತೆಗಳನ್ನು ಆಯಾ ಸಮಿತಿಗಳ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಎ. ಬಿ ಇಬ್ರಾಹಿಂ, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹೆಚ್. ಡಿ. ನಾರಾಯಣಸ್ವಾಮಿ, ಇಲಾಖೆಯ ಆಯುಕ್ತರಾದ ನಟೇಶ್, ಜಾನುವಾರು ಸಂಪನ್ಮೂಲದ ಅಪರ ನಿರ್ದೇಶಕರಾದ ಮಂಜುನಾಥ ಪಾಳೇಗಾರ್ ಅವರು ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.