ಬೆಂಗಳೂರು: ರಾಷ್ಟ್ರದ ಐಕ್ಯತೆಗಾಗಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಸಕಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಸಿದ್ಧತೆ: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಪ್ರತಿ ದಿನ 25 ಕಿ.ಮೀ.ನಂತೆ ಮಧ್ಯ ಕರ್ನಾಟಕದಲ್ಲಿ ಪಾದಯಾತ್ರೆ 21 ದಿನ ನಡೆಯಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಯುತ್ತದೆ. ದೇಶದ ಐಕ್ಯತೆಗಾಗಿ ನಡೆಯುತ್ತಿರುವ ಯಾತ್ರೆಯಲ್ಲಿ ರಾಹುಲ್ ಗಾಂಧಿ ನಾಯಕತ್ವ ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರವಲ್ಲ ದೇಶದ ಪ್ರತಿಯೊಬ್ಬ ನಾಗರಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಅತ್ಯಂತ ವ್ಯವಸ್ಥಿತವಾಗಿ ಪಾದಯಾತ್ರೆ ನಡೆಯಲಿದ್ದು, ರಾಜ್ಯದಲ್ಲಿ ಯಶಸ್ವಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಭಾರತ್ ಜೋಡೋ ಯಾತ್ರೆಯ ಉದ್ದೇಶ: ದೇಶದಲ್ಲಿ ಶಾಂತಿಯ ತೋಟ ನಿರ್ಮಾಣವಾಗಬೇಕು ಎಂಬುದು ಗಾಂಧಿ ಆಶಯ. ಇದನ್ನು ಈಡೇರಿಸುವುದು ಸಹ ನಮ್ಮ ಪಾದಯಾತ್ರೆಯ ಉದ್ದೇಶ. ಪ್ರತಿಯೊಬ್ಬ ನಾಗರಿಕರಿಗೂ ಮಾನಸಿಕ ಶಕ್ತಿ ತುಂಬುವುದು, ಸಾಮಾಜಿಕ ಬದ್ಧತೆಗೆ ಅಗತ್ಯ ಕ್ರಮ ಕೈಗೊಳ್ಳುವುದು, ಉದ್ಯೋಗ ಕಳೆದುಕೊಳ್ಳುತ್ತಿರುವ ಯುವಕರಿಗೆ ನ್ಯಾಯ ಒದಗಿಸುವುದು, ರಾಜ್ಯ ಮತ್ತು ರಾಷ್ಟ್ರದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಮಾಡುವುದು ನಮ್ಮ ಪ್ರಮುಖ ವಿಚಾರವಾಗಿದೆ. ರೈತನ ಬದುಕು ಹಸನಾಗಬೇಕು ಅವನು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಸಮಾಜದ ಪ್ರತಿಯೊಬ್ಬರ ಬದುಕನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಸರ್ವರಿಗೂ ಸಮ ಬಾಳು ಸಮ ಪಾಲು ಮಂತ್ರವನ್ನು ಜಪಿಸುತ್ತೇವೆ. ರಾಜ್ಯದ ಎಲ್ಲಾ ನಾಯಕರು ದಿಲ್ಲಿಯಲ್ಲಿ ಕುಳಿತು ಚರ್ಚಿಸಿ ಈ ಎಲ್ಲ ಯೋಜನೆಗಳ ಕುರಿತು ನಿರ್ಧಾರ ಕೈಗೊಂಡಿದ್ದೇವೆ ಎಂದು ವಿವರಿಸಿದರು.
'ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಿದೆ': ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅರ್ಥ ಐಕ್ಯತೆ ಯಾತ್ರೆ ನಡೆಯಬೇಕು ಎಂಬುದು ಉದಯಪುರದಲ್ಲಿ ನಡೆದ ಚಿಂತನ ಮಂಥನ ಶಿಬಿರದಲ್ಲಿ ತೀರ್ಮಾನವಾಗಿತ್ತು. ದೇಶದಲ್ಲಿ ಇಂದು ಸಾಮರಸ್ಯ ಹಾಳಾಗುತ್ತಿದೆ. ಐಕ್ಯತೆ ನಾಶವಾಗುತ್ತಿದೆ. ಹಾಗಾಗಿ ಸಮಾಜದಲ್ಲಿ ಮತ್ತೊಮ್ಮೆ ಸಾಮರಸ್ಯ ನಿರ್ಮಾಣವಾಗಬೇಕು. ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಿದೆ. ಸಂವಿಧಾನಕ್ಕೆ ರಕ್ಷಣೆ ಸಿಗುತ್ತಿಲ್ಲ. ಧರ್ಮರಾಜಕಾರಣ ಹೆಚ್ಚಾಗುತ್ತಿದ್ದು ಇದರ ಆಧಾರದ ಮೇಲೆ ಮತಗಳ ಕ್ರೋಢೀಕರಣ ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಯಾತ್ರೆ ಹೀಗಿರುತ್ತೆ: 3,500 ಕಿ.ಮೀ ನಷ್ಟು ಪಾದಯಾತ್ರೆ ನಡೆಯಲಿದೆ. ಕರ್ನಾಟಕದಲ್ಲಿ 511 ಕಿ.ಮೀ ದೂರ, 21 ದಿನ ಯಾತ್ರೆ ಸಾಗಲಿದೆ. ರಾಹುಲ್ ಗಾಂಧಿ ಜೊತೆ 125 ಪಾದಯಾತ್ರಿಗಳು ಇರ್ತಾರೆ. ರಾಜ್ಯ ಹಾಗೂ ಬೇರೆ ರಾಜ್ಯಗಳ ಅತಿಥಿಗಳು ಭಾಗವಹಿಸ್ತಾರೆ. ಕೇಂದ್ರದ ವೈಫಲ್ಯಗಳನ್ನೂ ಸಹ ಈ ಯಾತ್ರೆ ವೇಳೆ ಹೇಳಲಾಗುತ್ತದೆ. ಕರ್ನಾಟಕದಲ್ಲಿ ಬಹಳ ಯಶಸ್ವಿಯಾಗಿ ಈ ಯಾತ್ರೆ ಮಾಡುತ್ತೇವೆ ಎಂದು ಹೇಳಿದರು.
ಪಾದಯಾತ್ರೆ ಸಾಗುವುದು ಹೀಗೆ..: ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಸೆ.7ರಂದು ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಲ್ಲಿ ಮಧ್ಯಾಹ್ನ ಆರಂಭವಾಗಲಿದೆ. ಸಂಜೆ 4 ಗಂಟೆಗೆ 20 ಸಾವಿರ ಜನರು ರಾಹುಲ್ ಗಾಂಧಿ ಜೊತೆ ಪಾಲ್ಗೊಳ್ಳುವರು. ತಮಿಳುನಾಡಿನಲ್ಲಿ 4 ದಿನ, 19 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ಸಾಗಲಿದೆ. 125 ಜನರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೆಜ್ಜೆ ಹಾಕಲಿದ್ದಾರೆ. 12 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾತ್ರೆ ಸಾಗಲಿದೆ. ಕರ್ನಾಟಕದಲ್ಲಿ ಒಟ್ಟು 21 ದಿನ ಸಾಗಲಿದೆ. ಕರ್ನಾಟಕದಲ್ಲಿ ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಯಿಂದ 2 ಗಂಟೆಯವರೆಗೂ ಸಾಹಿತಿಗಳು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕ, ಯುವತಿಯರ ಜೊತೆ ಸಂವಾದ ನಡೆಯಲಿದೆ. ಗುಂಡ್ಲುಪೇಟೆ ಮಾರ್ಗವಾಗಿ ಪ್ರವೇಶಿಸುವ ಯಾತ್ರೆ ರಾಯಚೂರು ಜಿಲ್ಲೆಯೊಂದಿಗೆ ಮತ್ತೊಂದು ರಾಜ್ಯಕ್ಕೆ ಪ್ರವೇಶಿಸಲಿದೆ ಎಂದು ಮಾಹಿತಿ ಒದಗಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ: ರಾಜ್ಯದಲ್ಲಿ 21 ದಿನ ಓಡಾಟಕ್ಕೆ ಕಾರ್ಯತಂತ್ರ