ಬೆಂಗಳೂರು: ರಾಜ್ಯದಲ್ಲಿ ಸದ್ಯ ಶಾಲಾ-ಕಾಲೇಜು ಆರಂಭದ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರವೇನೋ ಅಕ್ಟೋಬರ್ 15ರ ನಂತರ ಶಾಲಾ-ಕಾಲೇಜು ಆರಂಭಿಸಬಹುದು ಎಂದು ತಿಳಿಸಿದೆ. ಆದರೆ, ಇತ್ತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೆ ಭಾರಿ ವಿರೋಧ ವ್ಯಕ್ತವಾಗ್ತಿದೆ.
ಈ ಮಧ್ಯೆ ಕೇಂದ್ರ ಸರ್ಕಾರ ಎಸ್ಒಪಿ ಜಾರಿ ಮಾಡಿದ್ದು, ಇದೀಗ ರಾಜ್ಯದ ಆರೋಗ್ಯ ಇಲಾಖೆ ಜತೆಗೆ ಶಿಕ್ಷಣ ಇಲಾಖೆ ಎಸ್ಒಪಿ ಸಿದ್ಧಪಡಿಸುತ್ತಿದೆ. ಶಾಲೆ ಪುನಾರಂಭಕ್ಕೆ ಇಲಾಖೆಯಿಂದ ಇನ್ನೊಂದು ವಾರದಲ್ಲಿ ಎಸ್ಒಪಿ ತಯಾರಿ ಕೆಲಸ ನಡೆಯಲಿದ್ದು ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಈ ಬಗ್ಗೆ ಮಾತಾನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, "ಇನ್ನೊಂದು ವಾರದಲ್ಲಿ ಶಿಕ್ಷಣ ಇಲಾಖೆಯಿಂದ ಎಸ್ಒಪಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಆರೋಗ್ಯ ಇಲಾಖೆಯಿಂದಲೂ ಎಸ್ಒಪಿ ಬರಬೇಕಿದೆ. ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ವರದಿ ನೀಡಲಾಗುತ್ತದೆ. ಬಳಿಕ ಶಿಕ್ಷಣ ಸಚಿವರು ಹಾಗೂ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ" ಎಂದು ಹೇಳಿದರು.