ಬೆಂಗಳೂರು: ಶಿವಮೊಗ್ಗ ಹುಣಸೋಡು ಗಣಿಗಾರಿಕೆ ದುರಂತ ಪ್ರಕರಣದ ಹಲವು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ತನಿಖೆಯೂ ನಡೀತಿದೆ. ಸುಧಾಕರ್ ಎಂಬುವವರನ್ನು ಬಂಧನ ಮಾಡಲಾಗಿದೆ. ಜಿಲೆಟಿನ್, ಸ್ಫೋಟಕಗಳು ಎಲ್ಲಿಂದ ಬಂದಿವೆ. ಯಾಕೆ ಸ್ಫೋಟ ನಡೀತು ಎಂದು ತಪಾಸಣೆ ನಡೀತಿದೆ. ನಾಳೆ, ನಾಡಿದ್ದು ತನಿಖೆಯ ಪ್ರಾಥಮಿಕ ವರದಿ ಬರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಮರಳು, ಕ್ವಾರಿ ಮೈನಿಂಗ್ ಮೇಲೆ ನಿಗಾ ಇಡಲು ಡಿಸಿ ನೇತೃತ್ವದಲ್ಲಿ ಸಮಿತಿಗಳಿವೆ. ಅಕ್ರಮ ಪ್ರಕರಣಗಳ ಮೇಲೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ. ಇನ್ನು ಸ್ಫೋಟಕ ಬಳಕೆ ಮಾಡುವ ಗಣಿಗಾರಿಕೆಗಳಿಂದಾಗುವ ನಿಯಮ ಉಲ್ಲಂಘನೆಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ನಮ್ಮ ಗೃಹ ಇಲಾಖೆ ಗಣಿಗಾರಿಕೆಗೆ ಅನುಮತಿ ಪಡೆದವರ ಮೇಲೆ ನಿಗಾ ಇಟ್ಟಿದೆ. ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳ ಸಭೆ ಮಾಡುತ್ತೇನೆ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆಗಳನ್ನು ಸಕ್ರಮ ಮಾಡುವ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡ ಬೊಮ್ಮಾಯಿ, ಲೈಸೆನ್ಸ್ ಹೋಲ್ಡರ್ಗಳು ಎಲ್ಲ ನಿಯಮಗಳನ್ನು ಪಾಲಿಸಬೇಕು. ಲೈಸೆನ್ಸ್ ತಗೊಂಡ ಮೇಲೆ ಎಷ್ಟು ಗಣಿಗಾರಿಕೆ ಮಾಡಬೇಕು. ಎಷ್ಟು ಸ್ಫೋಟಕ ಬಳಕೆ ಮಾಡಬೇಕು ಅಂತ ನಿಗದಿಯಾಗುತ್ತದೆ. ನಿಯಮ ನಿಗದಿಯಾಗದೇ ಗಣಿಗಾರಿಕೆ ಮಾಡಿದರೆ ಇಂಥ ದುರಂತ ನಡೆಯುತ್ತವೆ. ಕಾನೂನಿನಡಿಯಲ್ಲಿ ಗಣಿಗಾರಿಕೆ ಇರಲಿ ಎಂಬ ದೃಷ್ಟಿಯಿಂದ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ಎಲ್ಲೆಲ್ಲಿ ಲೈಸೆನ್ಸ್ ತಗೊಂಡಿಲ್ವೋ ಅಂಥ ಕಡೆ ಲೈಸೆನ್ಸ್ ತಗೊಳ್ಳಿ ಅಂತ ಸಿಎಂ ಹೇಳಿದ್ದು. ಲೈಸೆನ್ಸ್ಗೆ ಅರ್ಜಿ ಹಾಕಿ, ನಿಯಮ ಪಾಲಿಸಲಿ ಎಂಬ ಉದ್ದೇಶದಿಂದ ಹೇಳಿದ್ದಾರೆ. ಹುಣಸೋಡು ಗಣಿಗಾರಿಕೆ ಪ್ರಕರಣದಲ್ಲಿ ಗಣಿ ಮಾಲೀಕ ಮತ್ತು ಲೈಸೆನ್ಸ್ ಪಡೆದ ಇಬ್ಬರ ಮೇಲೂ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆಯ ಅತ್ಯಾಧುನಿಕ ಟ್ರಾಫಿಕ್ ವ್ಯವಸ್ಥೆ ಜಾರಿ: ಬಸವರಾಜ್ ಬೊಮ್ಮಾಯಿ
ಇದೇ ವೇಳೆ, ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಕೆಲವೊಂದು ಸೇಫರ್ ಝೋನ್ಗಳಿವೆ. ಅನುಮತಿ ಪಡೆದು ಸುರಕ್ಷಿತ ವಲಯಗಳಲ್ಲಿ ಗಣಿಗಾರಿಕೆ ಮಾಡುವುದು ತಪ್ಪಲ್ಲ. ಆದರೆ ಕೆಲವರು ಅನುಮತಿ ಪಡೆಯದೇ ಸೇಫರ್ ಝೋನ್ ಇಲ್ಲದೇ ಹೊರಗಡೆ ಗಣಿಗಾರಿಕೆ ಮಾಡುತ್ತಾರೆ. ಇದು ಅಕ್ರಮ, ಇಂಥವನ್ನು ನಿಲ್ಲಿಸಬೇಕು. ಸೇಫರ್ ಝೋನ್ಗಳಲ್ಲೂ ಕೆಲವರು ಅನುಮತಿ ಪಡೆದಿರಲ್ಲ. ಲೈಸೆನ್ಸ್ ಅವಧಿ ಮುಗಿದು ಹೋದರೂ ಕೆಲವರು ಗಣಿಗಾರಿಕೆ ಮಾಡುತ್ತಾರೆ. ಕೆಲವು ಅಧಿಕಾರಿಗಳು ಇದು ಗೊತ್ತಿದ್ದರೂ ಕಣ್ಮುಚ್ಚಿ ಕೂತಿರುತ್ತಾರೆ. ಸಿಎಂ ಹೇಳಿದ್ದು, ಎಲ್ಲ ಅನುಮತಿ ತಗೊಂಡು ಗಣಿಗಾರಿಕೆ ಮಾಡಿ ಅಂತ. ಕ್ರಮಬದ್ಧವಾಗಿ ಗಣಿಗಾರಿಕೆ ಮಾಡುವ ಕಡೆ ಲೈಸೆನ್ಸ್ ತಗೊಂಡು ಮಾಡಿ ಅಂತ ಸಿಎಂ ಹೇಳಿದ್ದು. ಬೆಂಗಳೂರಿನಲ್ಲೂ ಕೆಲವು ಅಕ್ರಮ ಗಣಿಗಾರಿಕೆ ನಿಲ್ಲಿಸಲಾಗಿದೆ ಎಂದು ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡರು.