ವಿಧಾನಸೌಧದಲ್ಲಿ ಮಳೆ ಹಾನಿ ಸಂಬಂಧ ಸಭೆ ನಡೆಸಲಾಗಿದ್ದು, ನಂತರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆಗೂಡಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಸಾಮಾನ್ಯವಾಗಿ 107 ಎಂಎಂ ಮಳೆಯಾಗುತ್ತದೆ. ಆದರೆ, ನಿನ್ನೆ ಒಟ್ಟು 277 ಎಂಎಂ ಮಳೆ ಆಗಿದೆ. ಕರಾವಳಿ ಭಾಗದಲ್ಲಿ ಸುಮಾರು 342 ಎಂಎಂ ಮಳೆ ಆಗಿದೆ. ಬೆಳಗಾವಿ, ಚಿಕ್ಕಮಗಳೂರು, ಹಾಸನ, ದ.ಕನ್ನಡ, ಧಾರವಾಡ, ಕೊಡಗು, ಮೈಸೂರು, ಶಿವಮೊಗ್ಗ, ಉ.ಕನ್ನಡದಲ್ಲಿ ಜಿಲ್ಲೆಗಳಲ್ಲಿ ಭಾರಿ ಮತ್ತು ಮಧ್ಯಮ ಮಳೆಯಾಗಿದೆ ಎಂದು ವಿವರಿಸಿದರು.
ಮಳೆಗೆ 4 ಮಂದಿ ನಾಪತ್ತೆಯಾಗಿದ್ದು, 5 ಪ್ರಾಣಿಗಳು ಸಾವಿಗೀಡಾಗಿವೆ. 12 ನಿರಾಶ್ರಿತ ಕೇಂದ್ರ ಸ್ಥಾಪಿಸಲಾಗಿದ್ದು, 262 ಜನ ಇದ್ದಾರೆ. ಭಾಗಶಃ 375 ಮನೆಗೆ ಹಾನಿಯಾಗಿದ್ದು, 12 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಭಾಗಮಂಡಲದಲ್ಲಿ 300 ಮಿಲಿ ಮೀಟರ್ ಮಳೆ ಬಂದಿದೆ ಎಂದರು.
ಉತ್ತರ ಒಳನಾಡಿನಲ್ಲಿ ಶೇ.39ಕ್ಕೂ ಅಧಿಕ ಮಳೆಯಾಗಿದೆ. ಮನೆ ಹಾನಿಗೊಳಗಾದವರಿಗೆ ಕೂಡಲೇ 10,000 ರೂಪಾಯಿ ಕೊಡುವಂತೆ ಸೂಚನೆ ನೀಡಲಾಗಿದೆ. ಪ್ರಾಣಿ ಸಾವಿಗೀಡಾದವರಿಗೂ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಡಿಸಿಗಳ ಪಿಡಿ ಖಾತೆಯಲ್ಲಿ 1268.36 ಕೋಟಿ ರೂಪಾಯಿ ಹಣ ಇದೆ ಎಂದು ಹೇಳಿದರು.
ಮುಂದಿನ ಮೂರು ದಿನಗಳಲ್ಲಿ ಕರವಾಳಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡು ಭಾಗದಲ್ಲಿ ಸಾಧಾರಣ ಮತ್ತು ಭಾರಿ ಮಳೆ ಬರುವ ಮುನ್ಸೂಚನೆ ಇದೆ. ಇನ್ನು ಉತ್ತರ ಒಳನಾಡು ಸಾಧಾರಣ ಮತ್ತು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದರು.
ನಾನು ಎರಡು ದಿನಗಳ ಕಾಲ ಕೊಡಗು ಮತ್ತು ಮೂಡಿಗೆರೆ ಭಾಗದಲ್ಲಿ ಪ್ರವಾಸ ಮಾಡಲಿದ್ದೇನೆ. ಎಲ್ಲಾ ಕಡೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಲಾಶಯಗಳನ್ನು ನಿಯಂತ್ರಿಸುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಜಲಾಶಯಗಳಲ್ಲಿ ಶೇ.75 ಕ್ಕಿಂತ ಅಧಿಕ ನೀರು ಸಂಗ್ರಹವಾಗಬಾರದು. ಒಳ ಹರಿವಿನಷ್ಟೇ ಹೊರ ಹರಿವು ಇರಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೊಯ್ನಾ ಅಣೆಕಟ್ಟೆಯಲ್ಲಿ ಶೇ.60 ರಷ್ಟು ಮಾತ್ರ ನೀರು ಸಂಗ್ರಹ ಆಗಿದೆ. ಹಾಗಾಗಿ ಸದ್ಯ ಯಾವುದೇ ಆತಂಕ ಇಲ್ಲ. ಆದರೂ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಈ ಬಾರಿ ಪೂರ್ವಯೋಜಿತವಾಗಿ ನೆರೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ನೆರೆ ಸಂದರ್ಭ ಯಾರೂ ರಜೆ ತೆಗೆದುಕೊಳುವಂತಿಲ್ಲ. ಎಲ್ಲರೂ ಹಾಜರಿರುವಂತೆ ಸೂಚಿಸಲಾಗಿದೆ. ಎರಡನೇ, ಮೂರನೇ ಮತ್ತು ನಾಲ್ಕನೇ ಹಂತದ ಮನೆ ನಿರ್ಮಾಣಕ್ಕಾಗಿ 300 ಕೋಟಿ ರೂ. ಗೂ ಹೆಚ್ಚು ಹಣ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ.
ಎಸ್ಡಿಆರ್ಎಫ್ 15 ತಂಡ ರಚನೆ: ಮಳೆ ಹಾನಿ ಪರಿಹಾರಕ್ಕಾಗಿ 15 ಎಸ್ಡಿಆರ್ಎಫ್ ತಂಡ ರಚನೆ ಮಾಡಿದ್ದು, ಎಲ್ಲಾ ರೀತಿಯಲ್ಲೂ ಸನ್ನದ್ಧರಾಗಿದ್ದೇವೆ ಎಂದು ಇದೇ ವೇಳೆ ಗೃಹ ಸಚಿವ ಬೊಮ್ಮಾಯಿ ತಿಳಿಸಿದರು. 4 ತಜ್ಞರ ವಿಶೇಷ ತಂಡ ರಚಿಸಲಾಗಿದೆ. ಬೆಳಗಾವಿ, ಕಲಬುರ್ಗಿ, ಬೆಂಗಳೂರು, ಮಂಗಳೂರಲ್ಲಿ ಈ ತಂಡ ರಚನೆ ಮಾಡಿದ್ದೇವೆ. ಈ ತಂಡ ಎಲ್ಲಾ ರೀತಿಯಲ್ಲಿ ಸಜ್ಜಾಗಿ ಇರಲಿದ್ದಾರೆ. ಇನ್ನು ದಾವಣಗೆರೆ ಮತ್ತು ಮೈಸೂರಲ್ಲಿ ಎರಡು ಕಂಪನಿ ರಚಿಸಲು ನಿರ್ಧರಿಸಲಾಗಿದೆ. ಒಂದು ಕಂಪನಿಯಲ್ಲಿ 50 ಮಂದಿ ಇರಲಿದ್ದಾರೆ ಎಂದರು.
ಎನ್ಡಿಆರ್ಎಫ್ ರೀತಿಯಲ್ಲಿ ಎಸ್ಡಿಆರ್ಎಫ್ ಅನ್ನೂ ಬಲವರ್ಧನೆ ಮಾಡಿದ್ದೇವೆ. ಎಸ್ಡಿಆರ್ಎಫ್ನಲ್ಲಿ 375 ಮಂದಿ ಇರಲಿದ್ದಾರೆ. ಈ ಪೈಕಿ 100 ಮಂದಿ ಮಾಜಿ ಯೋಧರನ್ನು ನೇಮಕಾತಿ ಮಾಡಿ ತರಬೇತಿ ನೀಡಲಾಗುತ್ತದೆ ಎಂದರು.