ಬೆಂಗಳೂರು: ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರ ಡಿಸೆಂಬರ್ ಅಂತ್ಯದೊಳಗೆ ಇತ್ಯರ್ಥ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಂದು ಬೆಳೆವಿಮೆ ಪರಿಹಾರ ಇತ್ಯರ್ಥ ಸಂಬಂಧ ವಿಕಾಸ ಸೌಧದ ಸಚಿವರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 2022-23 ನೇ ಸಾಲಿನ ಬೆಳೆ ವಿಮೆ ಇತ್ಯರ್ಥ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. "ಯಾವುದೇ ಕಾರಣಕ್ಕೂ ಬೆಳೆವಿಮೆ ಪರಿಹಾರ ತಡವಾಗಬಾರದು. ರೈತರು ವಿಮೆಗಾಗಿ ಕಾದು ಕುಳಿತಿರುತ್ತಾರೆ. ಸಂಬಂಧಿಸಿದ ಇನ್ಸೂರೆನ್ಸ್ ಕಂಪನಿಗಳೊಂದಿಗೆ ನಿರಂತರ ಸಂಪರ್ಕವನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು ಎಂದರು.
ಆಧಾರ್ ಲಿಂಕ್ ಆಗದ ರೈತರು ಇರುವುದನ್ನು ಗಮನಿಸಿದ ಸಚಿವರು, "ಆದಷ್ಟು ಬೇಗನೇ ರೈತರ ಆಧಾರ್ ಕಾರ್ಡ್ ಬೆಳೆವಿಮೆಗೆ ಸರಿಯಾಗಿ ಲಿಂಕ್ ಆಗಿದಿಯೇ ಎಂಬುದನ್ನು ಪರಿಶೀಲಿಸಬೇಕು. ಬೆಳೆವಿಮೆಗೆ ಇನ್ಸೂರೆನ್ಸ್ ಮಾಡಿಸಿ ಆಯಿತು ಎಂಬುದಷ್ಟನ್ನೇ ಗಮನಿಸದೇ ಸರಿಯಾಗಿ ಆಧಾರ್ ಕಾರ್ಡ್ ಮಾಹಿತಿ ಲಿಂಕ್ ಆಗಿದಿಯೇ? ಮಾಹಿತಿ ಸರಿಯಿದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅಲ್ಲದೇ ಇನ್ಸೂರೆನ್ಸ್ ಕಂಪನಿಗಳು ಇನ್ಸೂರೆನ್ಸ್ ಮಾಡಿಸಿಕೊಂಡು ಸುಮ್ಮನಾದರಷ್ಟೇ ಸಾಲದು. ರೈತನಿಗೆ ನಿಯಮಬದ್ಧವಾಗಿ ಬೆಳೆವಿಮೆ ಪರಿಹಾರ ಒದಗಿಸುವಲ್ಲಿ ನ್ಯಾಯವಾಗಿ ಕೆಲಸ ಮಾಡಬೇಕು. ಒಂದು ವೇಳೆ ಆಧಾರ್ ಅಥವಾ ಇನ್ಯಾವುದೇ ಮಾಹಿತಿ ರೈತನಿಂದ ಅಥವಾ ಅಧಿಕಾರಿಗಳ ಕಣ್ತಪ್ಪಿನಿಂದಲೋ ಅಥವಾ ಇನ್ಯಾವುದಾದರೂ ಕಾರಣಕ್ಕೆ ತಪ್ಪಿದ್ದಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡಬೇಕು.
ಈ ಕೆಲಸಗಳಲ್ಲಿ ಯಾರೂ ಅಸಡ್ಡೆ ತೋರಿಸಬಾರದು. ಸರಿಯಾಗಿ ಬೆಳೆ ವಿಮೆ ಪರಿಹಾರ ಇತ್ಯರ್ಥವಾಗುವಂತೆ ಕೃಷಿ ಅಧಿಕಾರಿಗಳೊಂದಿಗೆ ಕೈಜೋಡಿಸಬೇಕೆಂದು ಸಚಿವರು ತಾಕೀತು ಮಾಡಿದರು. ಸಭೆಯಲ್ಲಿ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸ, ಆಯುಕ್ತರಾದ ಶರತ್ ಪಿ, ಬೆಳೆವಿಮೆ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ನಕಲಿ ಬೀಜ, ಗೊಬ್ಬರ ತಡೆಗೆ ಬಿಗಿ ಕ್ರಮ: ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವ ಬಿ.ಸಿ.ಪಾಟೀಲ್