ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳು ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದವು. ಪ್ರಕರಣವನ್ನ ಎನ್ಐಎ (ರಾಷ್ಟ್ರೀಯ ತನಿಖಾದಳ) ಗೆ ಒಪ್ಪಿಸುವಂತೆ ಒತ್ತಾಯಿಸಿ ನಗರ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು, ಬಳಿಕ ಟೌನ್ಹಾಲ್ವರೆಗೂ ಮೆರವಣಿಗೆ ಮೂಲಕ ಬಂದರು. ಪ್ರತಿಭಟನೆಯಲ್ಲಿ ನೂರಾರು ಜನ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡ ಮೋಹನ್ ಗೌಡ, ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಹರ್ಷ, ಚಂದ್ರು ಕೊಲೆಯ ಬಳಿಕ ಈಗ ಪ್ರವೀಣ್ ಹತ್ಯೆಯಾಗಿದೆ. ಇಲ್ಲಿಯವರೆಗೆ ಒಟ್ಟು 35 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
35 ಹಿಂದೂ ಯುವಕರ ಈ ಪೈಕಿ 24 ಕೊಲೆಗಳಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಕೈವಾಡ ಇರುವುದು ಸಾಬೀತಾಗಿದೆ. ಆದರೂ, ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜೊತೆಗೆ ಈ ಸಂಘಟನೆಗಳ ಮೇಲೆ ನಿಷೇಧ ಹೇರುವ ಕೆಲಸ ಮಾಡುತ್ತಿಲ್ಲ. ಇದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಿಂದೂ ಕಾರ್ಯಕರ್ತರ ಮೇಲಿರುವ ನಿರ್ಲಕ್ಷ್ಯವನ್ನು ತೋರುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮೋದ್ ಮುತಾಲಿಕ್ಗೆ ದ.ಕ ಜಿಲ್ಲಾ ಪ್ರವೇಶ ನಿಷೇಧ