ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಇಲ್ಲದೇ ಇದ್ದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಭೇಟಿ ಮಾಡುತ್ತಿದ್ದೇವೆ. ಮತಾಂತರ ದೇಶಾದ್ಯಂತ ನಡೆಯುತ್ತಿದೆ. ಇದು ಬ್ರಿಟೀಷರಿಂದ ಪ್ರಾರಂಭವಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತಾರೆ ಅಂತ ಗೊತ್ತಾಗ್ತಿದ್ದಂತೆ ಪಾದ್ರಿಗಳು ಸಿಎಂ ಭೇಟಿಯಾಗಿದ್ದಾರೆ. ಇದು ಸರಿಯಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಅಂತ ಆಗ್ರಹ ಮಾಡುತ್ತೇವೆ ಎಂದರು.
50ಜನ ಸ್ವಾಮೀಜಿಗಳು ಈ ಬಗ್ಗೆ ಮನವಿ ಮಾತನಾಡಲು ಬರಲಿದ್ದಾರೆ. ಮಾದಾರ ಚನ್ನಯ್ಯ, ಸೇವಾಲಾಲ್ ಸ್ವಾಮೀಜಿ, ಸಿದ್ದಲಿಂಗ ಸ್ವಾಮಿ ಸೇರಿದಂತೆ ಹಲವರು ಬರಲಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲೇಬೇಕು. ಮತಾಂತರವನ್ನು ತಡೆಯದಿದ್ದರೆ, ಕಾಯ್ದೆಯನ್ನು ಜಾರಿ ಮಾಡದಿದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಬಿಟ್ ಕಾಯಿನ್ ಪ್ರಕರಣ ತನಿಖೆಯಾಗಬೇಕು:
ಬಿಟ್ ಕಾಯಿನ್ ಪ್ರಕರಣ ತನಿಖೆಯಾಗಬೇಕು. ಇದರಲ್ಲಿ ಯಾರೇ ಇದ್ರೂ ಬಹಿರಂಗ ಪಡಿಸಬೇಕು. ಪರಸ್ಪರ ದೂಷಣೆ ನಡೆಯುತ್ತಿದೆ ವಿನಃ ಸತ್ಯ ಹೊರ ಬರ್ತಿಲ್ಲ. ಮುಚ್ಚಿಹಾಕುವ ಕೆಲಸ ಆಗಬಾರದು. ಸಾಮಾಜಿಕ ಕಳ ಕಳಿಯಿಂದ ತನಿಖೆ ಮಾಡಬೇಕು ಎಂದರು.
ಇದನ್ನು ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಠಾಧಿಪತಿಗಳಿಂದ ಒತ್ತಾಯ : ಪರಿಶೀಲಿಸುವುದಾಗಿ ಸಿಎಂ ಭರವಸೆ