ಬೆಂಗಳೂರು : ಹಾಸನ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದರು.
ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ಇಂದು ಭೇಟಿ ಮಾಡಿದ ಪ್ರಜ್ವಲ್ ರೇವಣ್ಣ, ಹಾಸನದಲ್ಲಿ ಗೆಲ್ಲಲು ಆಶೀರ್ವದಿಸುವಂತೆ ಮನವಿ ಮಾಡಿದ್ದಾರೆ. ಹಾಸನದಲ್ಲಿ ಇನ್ನೂ ಕೆಲವು ಕಾಂಗ್ರೆಸ್ ನಾಯಕರು ಪ್ರಜ್ವಲ್ಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಂಪೂರ್ಣ ಸಹಕಾರ ಕೋರಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಪ್ರಜ್ವಲ್ ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಎಲ್ಲೆಲ್ಲಿ ಪ್ರಚಾರಕ್ಕೆ ಬರುತ್ತೇನೆ ಅಂತ ತಿಳಿಸಿದ್ದಾರೆ. ನಾವು ಸಣ್ಣವರಿದ್ದಾಗಿಂದಲೂ ನಾವು ಸಿದ್ದರಾಮಯ್ಯನವರನ್ನ ನೋಡಿಕೊಂಡು ಬೆಳೆದವರು. ನಮ್ಮ ಮನೆಯವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ ಎಂದರು.
ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿ ಈಗ ಅಭ್ಯರ್ಥಿಯಾಗಿರುವ ಎ.ಮಂಜು ಅವರ ಬಗ್ಗೆ ನನಗಂತೂ ಭಯ ಇಲ್ಲ. ನಾನು ಯಾವತ್ತಾದ್ರೂ ಎ.ಮಂಜು ವಿರುದ್ಧ ಮಾತನಾಡಿದ್ದು ಕೇಳಿದ್ದೀರಾ..?. ನಾನು ಟೀಕೆಯ ರಾಜಕಾರಣ ಮಾಡೋದಿಲ್ಲ ಎಂದು ಹೇಳಿದರು.
ಹಾಸನದಲ್ಲಿ ಎ.ಮಂಜು ನಾಮಪತ್ರ ಸಲ್ಲಿಸುವ ವೇಳೆ ಜನ ಸೇರಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್, ಹಣ ಕೊಟ್ಟು ಜನ ಸೇರಿಸೋದು ದೊಡ್ಡದಲ್ಲ. ನಾನು ಈಗ ತಾನೇ ಪ್ರಚಾರಕ್ಕೆ ಬರ್ತಿದ್ದೀನಿ. ಹೀಗಾಗಿ ಎಲ್ಲರ ಆಶೀರ್ವಾದ ತೆಗೆದುಕೊಂಡರೆ ಗೆಲ್ಲುವುದಕ್ಕೆ ಒಳ್ಳೆಯದು. ಹಾಸನ ಕಾಂಗ್ರೆಸಿಗರೆಲ್ಲರೂ ಒಟ್ಟಾಗಿ ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಕಡೂರು, ಅರಕಲಗೂಡು, ಅರಸಿಕೆರೆ, ಹಾಸನಕ್ಕೆ ಸಿದ್ದರಾಮಯ್ಯನವರು ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.