ಬೆಂಗಳೂರು: ಧರ್ಮ ವಿಭಜನೆಗೆ ಸಿದ್ದರಾಮಯ್ಯ ಅವರು ಪಶ್ಚಾತ್ತಾಪವಲ್ಲ, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕವಾದ ಯಡಿಯೂರಪ್ಪರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಮಾಡಲು ಹೋಗಿ ಒಡಕು ಮೂಡಿಸಿದ್ರು. ಈಗ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಬೇಕು ಅಂತಾರೆ. ಹಿಂದೂ-ಮುಸ್ಲಿಂರ ನಡುವೆ ಒಡಕು ಮೂಡಿಸುವ ಕೆಲಸ ಮಾಡ್ತಿದ್ದಾರೆ. ಅವರದ್ದು ಬ್ರಿಟಿಷರ ಒಡೆದು ಆಳುವ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈಗ ಬಂದು ಲ್ಯಾಂಡ್ ಆಗಿದ್ದೇನೆ. ಅದರ ಬಗ್ಗೆ ಆಮೇಲೆ ಹೇಳ್ತೀನಿ. ಆದ್ರೆ ಯಾರೇ ಎಸೆಯಲಿ ಅದು ತಪ್ಪು, ಇದೇ ಮಾತನ್ನು ಯಡಿಯೂರಪ್ಪನವರು ಸಹ ಹೇಳಿದ್ದಾರೆ. ಸಿದ್ದರಾಮಯ್ಯನೋರು ಎಲ್ಲದರಲ್ಲೂ ರಾಜಕಾರಣ ಹುಡುಕ್ತಾರೆ. ಅದರಲ್ಲೂ ತುಷ್ಟೀಕರಣದ ರಾಜಕಾರಣ. ಈಗ ಬಿಜೆಪಿಯ ಭಯದಿಂದ ಮಠ, ಮಂದಿರಗಳಿಗೆ ತಿರಗುತ್ತಿದ್ದಾರೆ. ಹಿಂದೆ ಅವರು ಯಾವ ಮಠಗಳಿಗೂ ಹೋಗ್ತಿರಲಿಲ್ಲ ಎಂದು ಆರೋಪಿಸಿದರು.
ಮೋದಿಯವರು ಉತ್ತರಪ್ರದೇಶ ಎಲ್ಲಾ ಕಡೆ ಹೋಗಿದ್ದು, ಅವರ ಜನಪ್ರಿಯತೆ ನೋಡಿ ಸಿದ್ದರಾಮಯ್ಯ ಭಯಗೊಂಡಿದ್ದಾರೆ. ಸಿದ್ದರಾಮಯ್ಯನವರಿಗೂ ಹಿಂದುತ್ವ ಪರಂಪರೆಯ, ಸ್ವಾಮಿಗಳ ಬಗ್ಗೆ ಗೌರವವಿಲ್ಲ. ಆದ್ರೆ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವ ಇರೋದ್ರಿಂದ ಎಲ್ಲಾ ಕಡೆ ಹೋಗ್ತಿದ್ದಾರೆ. ಕರ್ನಾಟಕದಲ್ಲಿ ಮೋದಿ ಬಂದು ಪ್ರಚಾರ ಮಾಡಿದ್ರೆ ಏನಾಗುತ್ತೋ ಅನ್ನೂ ಭಯ ಅವರಿಗಿದೆ. ಹೀಗಾಗಿ ಪೂಜೆ ಪುನಸ್ಕಾರದ ಕೆಲಸಗಳ್ನನ್ನು ಮಾಡ್ತಿದ್ದಾರೆ. ಮೊದಲೇ ಅವರು ಟವೆಲ್ ಹಾಕೋ ಕೆಲಸ ಮಾಡ್ತಿದ್ದಾರೆ. ಆದರೆ ಆ ಟವೆಲ್ ಹಾಕೋ ಪ್ರಯತ್ನ ಆಗೋದಿಲ್ಲ ಎಂದು ತಿಳಿಸಿದರು.
ಯಡಿಯೂರಪ್ಪ ಮಾರ್ಗದರ್ಶನ: ನಮ್ಮ ಪಕ್ಷದ ಅತ್ಯಂತ ಹಿರಿಯ ಮುಖಂಡರು, ನಮ್ಮ ಮಾರ್ಗದರ್ಶಕರು ಯಡಿಯೂರಪ್ಪ. ಅವರನ್ನು ನಮ್ಮ ಪಕ್ಷದ ಹೈಯೆಸ್ಟ್ ಪಾಲಿಸಿ ಮೇಕಿಂಗ್ ಸ್ಥಾನಕ್ಕೆ ನೇಮಕ ಮಾಡಿದ್ದಾರೆ. ನಮಗೆ ತುಂಬಾ ಸಂತೋಷವಾಗಿದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಶುಭ ಕೋರಿದೆ. ಮುಂದಿನ ಚುನಾವಣಾ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲೂ ನಿಮ್ಮ ಮಾರ್ಗದರ್ಶನ ಬೇಕು ಅಂದ್ವಿ. ಮುಂದೆಯೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅವರು ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿದರು ಎಂದರು.
ಯಡಿಯೂರಪ್ಪರನ್ನ ಹೈಕಮಾಂಡ್ ಮೂಲೆಗುಂಪು ಮಾಡಿದೆ ಅಂತಾ ಕಾಂಗ್ರೆಸ್ನ ಹಿಂದಿನ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಜೋಶಿ ಅವರು, ಯಡಿಯೂರಪ್ಪರನ್ನು ಅಥವಾ ಪಾರ್ಟಿಗೆ ಇಷ್ಟೊಂದು ಶ್ರಮ ಹಾಕಿರೋರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಈ ರೀತಿ ಮಾಡ್ತಿದ್ರು. ಅಲ್ಲಿ ನಕಲಿ ಗಾಂಧಿ ಕುಟುಂಬ ಬಿಟ್ರೆ ಬೇರೆಯವರಿಗೆ ಕಿಮ್ಮತ್ತಿಲ್ಲ. ನಮ್ಮಲ್ಲಿ ಜನರಿಂದ, ಜನರ ಆಶೀರ್ವಾದದಿಂದ ಆಯ್ಕೆಯಾದವರು. ನಮ್ಮಲ್ಲಿ ಎಲೆಕ್ಟ್, ಅವರಲ್ಲಿ ಸೆಲೆಕ್ಟ್. ಹೀಗಾಗಿ ಆರೋಪ ಮಾಡಿಕೊಂಡೇ ಇರ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಬದಲಾವಣೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ ಅವರು, ನಮ್ಮಲ್ಲಿ ಆ ರೀತಿಯ ಯಾವುದೂ ಚರ್ಚೆ ಇಲ್ಲ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ, ಆರ್ಥಿಕತೆ ಸುಧಾರಿಸಲು ಎರಡು ವರ್ಷ ಬೇಕು: ಎಂ ಬಿ ಪಾಟೀಲ