ಬೆಂಗಳೂರು: ಗೋಹತ್ಯೆ ನಿಷೇಧ ಬಿಲ್ ತಂದೇ ತರ್ತೇವೆ, ವಿಧಾನಸಭೆಯಲ್ಲಿ ಬಿಲ್ ಮಂಡನೆ ಮಾಡ್ತೇವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಬಿಲ್ ಜಾರಿಯಲ್ಲಿದೆ. ಅಲ್ಲಿಗೆ ತೆರಳಿ ಅಧ್ಯಯನ ನಡೆಸಿದ್ದೇನೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಆದರೆ ಚರ್ಚಿಸಿದ್ದೇನೆ. ಸರ್ಕಾರದ ಕಾರ್ಯದರ್ಶಿಗಳ ಜತೆ ಸಮಾಲೋಚನೆ ನಡೆಸಿದ್ದೇನೆ. ಅಲ್ಲಿನ ಮಾದರಿಯಲ್ಲೇ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬರಲಿದೆ ಎಂದರು.
ಎಷ್ಟೇ ಸಮಸ್ಯೆ ಆದರೂ ನಾವು ಈ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರ್ತೇವೆ. ನಮ್ಮ ರಾಜ್ಯದ ಕಾನೂನನ್ನು ಮುಂದೆ ಇತರರು ಅನುಸರಿಸಬೇಕು. ಆ ರೀತಿ ಬಿಗಿ ಕಾನೂನು ಜಾರಿಗೆ ತರ್ತೇವೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಮಸೂದೆ ಮಂಡನೆ ಮಾಡುತ್ತೇವೆ. ಕಾಂಗ್ರೆಸ್ನವರು ಮಾಡೋದನ್ನ ಅವ್ರು ಮಾಡಲಿ. ನಾವು ಮಾಡಬೇಕಿರೋದನ್ನ ಮಾಡ್ತೀವಿ ಎಂದು ಹೇಳಿದರು.