ಬೆಂಗಳೂರು: ಹಸು ಸಾಕಣೆ ಮಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯಬೇಕು ಎಂಬ ನಿರ್ಣಯ ಕೈಬಿಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಶುಸಂಗೋಪನೆ ಇಲಾಖೆಯ ಗಮನಕ್ಕೆ ತರದೇ ರಾಜ್ಯದಲ್ಲಿ ಡೈರಿ ಫಾರಂ ಮತ್ತು ಗೋಶಾಲೆ ಆರಂಭಿಸಲು ಅನುಮತಿ ಪಡೆಯಬೇಕು ಎಂದು ತಿಳಿಸಿದ್ದು, ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದಿದ್ದಾರೆ.
ರೈತರು, ಪಶುಪಾಲಕರು ದೇಶದ ಬೆನ್ನೆಲುಬಾಗಿದ್ದು, ರಾಷ್ಟ್ರದ ಜಿಡಿಪಿಯಲ್ಲಿ ಅವರ ಪಾಲು ಗಮನಾರ್ಹವಾಗಿದೆ. ಇದನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ರೈತಾಪಿ ವರ್ಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಹಸು ಸಾಕಣೆ ಮಾಡಬೇಕು ಎಂದು ಹೇಳಿರುವುದಕ್ಕೆ ರಾಜ್ಯದ ಅನೇಕ ರೈತರು ಆಂತಕಗೊಂಡು ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ, ಪಟ್ಟಣ ಹಾಗೂ ಹಳ್ಳಿಗಳಿಂದ 200 ಮೀ. ದೂರದಲ್ಲಿ ಗೋಶಾಲೆ ಹಾಗೂ ಡೈರಿ ಫಾರಂ ಸ್ಥಾಪಿಸಬೇಕು ಎಂದು ತಿಳಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿಲ್ಲ. ಆದರೂ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗಲು ಬಿಡುವುದಿಲ್ಲ ಎಂದಿದ್ದಾರೆ.
ಪಶುಸಂಗೋಪನೆ ಇಲಾಖೆಯಿಂದ ಹೈನುಗಾರಿಕೆಗೆ ಉತ್ತೇಜನ ನೀಡಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಷರತ್ತುಗಳನ್ನು ವಿಧಿಸಿದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಈ ನಿರ್ಧಾರವನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವ ಆಧಾರದ ಮೇಲೆ ಕೈಗೊಂಡಿದೆ ಎಂದು ತಿಳಿದಿಲ್ಲ. ನಾನು ಅರಣ್ಯ ಸಚಿವರು ಹಾಗೂ ಕಾನೂನು ಸಚಿವರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.