ಬೆಂಗಳೂರು : ಕನ್ನಡ ಚಿತ್ರರಂಗದ ರಾಜರತ್ನ ಹಾಗೂ ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ.
ಆದರೆ, ಅವರಿಗೆ ಇದ್ದ ಪರಿಸರ ಕಾಳಜಿ, ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ. ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.
ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ತೋರಿಸಲಾಗಿದೆ. ಇನ್ನು ಡಾ. ರಾಜ್ ಕುಮಾರ್ ಕೂಡ ಸಾಮಾಜಿಕ ಕಳಕಳಿಯನ್ನ ಹೊಂದಿದ್ದ ಮೇರು ನಟನಾಗಿದ್ದರು.
ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಮಾತಿಗೆ ತಕ್ಕಂತೆ ನಡೆದುಕೊಂಡವರು ಅಣ್ಣಾವ್ರು. ಅಂದು ನಂದಿನಿ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್ಕುಮಾರ್, ಯಾವುದೇ ಸಂಭಾವನೆ ತೆಗೆದುಕೊಳ್ಳದೆ ರೈತರ ಪರ ನಿಂತಿದ್ದರು.
ತಂದೆಯ ಆದರ್ಶಗಳನ್ನ ಪಾಲಿಸಿಕೊಂಡ ಪುನೀತ್ ರಾಜ್ಕುಮಾರ್ ಕೂಡ ಒಂದು ರೂಪಾಯಿ ಸಂಭಾವನೆ ಪಡೆಯದೆ ಕೆಎಂಎಫ್ ನಂದಿನಿ ಹಾಲಿನ ರಾಯಭಾರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ಪ್ಯಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಭಾವಚಿತ್ರವನ್ನ ಪ್ರಿಂಟ್ ಮಾಡಿ ವಿಶೇಷ ಗೌರವ ಸೂಚಿಸಲಾಗಿದೆ. ವರ್ಷದ ಕೊನೆಯ ದಿನವಾದ ಇಂದು ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಭಾವಚಿತ್ರವನ್ನ ಮುದ್ರಿಸಿದ್ದಾರೆ. ಹೀಗಾಗಿ, ಕೋಟ್ಯಂತರ ಅಭಿಮಾನಿಗಳಿಗೆ ಸಂತೋಷವಾಗಿದೆ.
ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಚಿತ್ರತಂಡದಿಂದ ಹೊಸ ವರ್ಷಕ್ಕೆ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಇರುವ ಪೋಸ್ಟರ್ ಇದಾಗಿದೆ.
ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್ ಅಂತಾ ಕರೆಯಿಸಿಕೊಂಡಿರುವ ಪ್ರಭುದೇವ ಸಹೋದರ ಎಸ್. ನಾಗೇಂದ್ರ ಪ್ರಸಾದ್ ಈ ಸಿನಿಮಾವನ್ನ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ವಿಶೇಷ ಪಾತ್ರವೊಂದನ್ನ ಮಾಡಿದ್ದಾರೆ.
ಇದರ ಜೊತೆಗೆ ಪ್ರಭುದೇವ ಜೊತೆ ಪವರ್ ಸ್ಟಾರ್ ಬೊಂಬಾಟ್ ಡ್ಯಾನ್ಸ್ ಮಾಡಿರೋ ಫೋಟೋಗಳು ಸಖತ್ ವೈರಲ್ ಆಗಿತ್ತು. ಈಗ ಲಕ್ಕಿಮ್ಯಾನ್ ಪೋಸ್ಟರ್ನಲ್ಲಿ ಪವರ್ ಸ್ಟಾರ್ ಹೊಸ ರೂಪ ಕಂಡು ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ.