ಬೆಂಗಳೂರು: ಮಂಡ್ಯದಲ್ಲಿ ಮೊದಲ ಬಾರಿ ಕಮಲ ಅರಳಿರಬಹುದು. ಆದ್ರೆ ಅರಳಿದ ಕಮಲ ಮುದುಡಲಿದೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಉಪ ಚುನಾವಣಾ ಸೋಲಿನ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮದೇ ಧಾಟಿಯಲ್ಲಿ ಮಾತನಾಡಿದ್ದಾರೆ.
ಜೆ ಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ನಂಜನಗೂಡ, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ನಂತರ ನಡೆದ ಜನರಲ್ ಚುನಾವಣೆಯಲ್ಲಿ ಸೋಲಲಿಲ್ಲವೇ? ಎಂದು ಫಲಿತಾಂಶದ ಕುರಿತು ವಿವರಣೆ ನೀಡಿದ್ರು.
ಬಿಜೆಪಿ ಇರೋದೇ ಆಪರೇಷನ್ ಕಮಲ ಮಾಡುವುದಕ್ಕೆ. ಬಿಜೆಪಿಯ ಸಂಸ್ಕೃತಿಯೇ ಆಪರೇಷನ್. ಅವರಿಗೆ ಇನ್ನೂ ಜೆಡಿಎಸ್ ಬಗ್ಗೆಯೇ ಭಯ ಇದೆ. ಆದರೆ ಜೆಡಿಎಸ್ ಶಾಸಕರು ಪಕ್ಷ ತೊರೆಯುತ್ತಿದ್ದಾರೆ ಎನ್ನುವುದು ಊಹಾಪೋಹ ಎಂದು ಸ್ಪಷ್ಟಪಡಿಸಿದ ಹೆಚ್ಡಿಕೆ, ನಾವು ಯಾರನ್ನೂ ಖರೀದಿ ಮಾಡಲ್ಲ, ಸರ್ಕಾರವನ್ನು ಅಸ್ಥಿರಗೊಳಿಸಲೂ ಯತ್ನಿಸಲ್ಲ. ಒಳ್ಳೆಯ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ರು.
ನಾನು ಮತ್ತೆ ಪಕ್ಷದ ಅಧ್ಯಕ್ಷ ಆಗುತ್ತೇನೆ ಎನ್ನುವುದು ಕೇವಲ ಊಹಾಪೋಹ ಮಾತ್ರ. ನಾನೇನಿದ್ದರೂ ಪಕ್ಷ ಸಂಘಟನೆ ಮಾಡುತ್ತೇನೆ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಮುಂದೆ ಯಾರಾದರೂ ಮುಖ್ಯಮಂತ್ರಿ ಆಗಲಿ, ಏನೂ ತೊಂದರೆ ಇಲ್ಲ. ಆದರೆ ಈಗ ಯಾರೂ ಪಕ್ಷಕ್ಕ ಹಾನಿ ಮಾಡಬೇಡಿ, ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿಯುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ಅದರ ಲಾಭವನ್ನು ಯಾರಾದರೂ ತೆಗೆದುಕೊಳ್ಳಿ. ಈಗ ಸಹಕಾರ ನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ರು.
ಅನುದಾನ ಕೊಡುವಾಗ ಪ್ರಾಮುಖ್ಯತೆಯನ್ನು ನೋಡಿ ಕೊಡಬೇಕು. ನನ್ನ ಬಜೆಟ್ಗೆ ನೀವೇ ಸದನದಲ್ಲಿ ಅನುಮತಿ ಪಡೆದು ನಂತರ ಅಂತಹ ಕಾರ್ಯಕ್ರಮ ರದ್ದು ಮಾಡಿ ಬೇರೆ ಕಡೆ ಕೊಡುವುದು ಪ್ರಜಾಪ್ರಭುತ್ವ ವ್ಯವಸ್ಥೆನಾ? ನಾವು ಯಾರಿಗೋ ಅನುದಾನ ಕೊಟ್ಟಿಲ್ಲ, ಅದು ಕ್ಷೇತ್ರಕ್ಕೆ ಕೊಟ್ಟಿದ್ದು. ಇದು ಸೈಕಲ್ ತರಹ ಕಾಲ ಚಕ್ರ ತಿರುಗಲಿದೆ ಎಂದು ಸಿಎಂ ಬಿಎಸ್ವೈ ಗೆ ಎಚ್ಚರಿಕೆ ನೀಡಿದ್ರು.
ಇನ್ನು, ಮಧು ಬಂಗಾರಪ್ಪ ಕಾಂಗ್ರೆಸ್ ಗೆ ಹೋಗುವ ವದಂತಿ ಕುರಿತು ಪ್ರತಿಕ್ರಿಯಿಸಿದ ಹೆಚ್ಡಿಕೆ, ಯಾರು ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ, ಅವರ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.