ಬೆಂಗಳೂರು: ಕೊರೊನಾ ಕಾರಣದಿಂದ ಕಾನೂನು ತರಗತಿಗಳ ಬೋಧನೆ ಪೂರ್ಣಗೊಳ್ಳದ ಹಿನ್ನೆಲೆ ಕಾನೂನು ವಿವಿ ಸೆಮಿಸ್ಟರ್ ಪರೀಕ್ಷೆ ಮುಂದೂಡುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ತರಗತಿಗಳು ನಡೆಯದೆ ಅರ್ಧದಷ್ಟೂ ಪಠ್ಯಕ್ರಮವೇ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಕೈಬಿಟ್ಟು ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪರೀಕ್ಷೆಯ ನಿರ್ಧಾರ ಕೈಗೊಳ್ಳುವಂತೆ ಯುಜಿಸಿ ತಿಳಿಸಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಉಲ್ಭಣಿಸುತ್ತಿರುವಾಗ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪ್ರತಿಷ್ಠೆಗೆ ಅಂಟಿಕೊಳ್ಳದೆ ಸೆಮಿಸ್ಟರ್ ಪರೀಕ್ಷೆ ಕೈಬಿಡುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸುವುದು ಸೂಕ್ತವಲ್ಲದ ಕಾರಣ, ಕಾನೂನು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಅವರಿಗೆ ಅನುಕೂಲಕರವಾದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆಗೆ ಹಾಜರಾಗಲು ಕಾನೂನು ವಿಶ್ವವಿದ್ಯಾಲಯ ಅವಕಾಶ ನೀಡಬೇಕು ಎಂದು ಟ್ವೀಟ್ನಲ್ಲಿ ಅವರು ಹೇಳಿದರು.