ಬೆಂಗಳೂರು: ಕೊರೊನ ಸಾಂಕ್ರಾಮಿಕ ಸೋಂಕು ದೇಶವ್ಯಾಪಿ ತೀವ್ರಗತಿಯಲ್ಲಿ ಹರಡುತ್ತಿದ್ದು, ಸೋಂಕಿನ ಎರಡನೇ ಅಲೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಸೋಂಕಿನ ಮೊದಲ ಅಲೆ ಉಂಟುಮಾಡಿದ ಸಂಕಷ್ಟದಿಂದ ಜನತೆ ಇನ್ನೂ ಹೊರಬಂದಿಲ್ಲ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಸಚಿವರು ಸೋಂಕಿಗೆ ಒಳಗಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಹತ್ತು ಮಂದಿಗಿಂತ ಹೆಚ್ಚು ಜನರು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೋಂಕು ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗ. ಈ ಎಲ್ಲಾ ಗೊಂದಲ ಮತ್ತು ಸಂಕಷ್ಟಗಳ ನಡುವೆ ಕರ್ನಾಟಕದ ರಾಜ್ಯ ಚುನಾವಣಾ ಆಯೋಗ ಏಪ್ರಿಲ್ 27ರಂದು ಹತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನಿಸಿದೆ ಎಂದರು.
ಮತ ಪ್ರಚಾರದಿಂದ ಮತದಾನದವರೆಗಿನ ಚುನಾವಣಾ ಪ್ರಕ್ರಿಯೆಯಲ್ಲಿ ನಾಗರಿಕರು ಗುಂಪು ಸೇರುವುದರಿಂದ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳಿವೆ. ಮತ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆ ಮನೆ ಭೇಟಿ ಮಾಡುವುದರಿಂದ ಸೋಂಕು ವೇಗವಾಗಿ ಹರಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ನಮ್ಮ ರಾಜ್ಯದ ಆಸ್ಪತ್ರೆಗಳು ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಆಸ್ಪತ್ರೆಗಳಲ್ಲಿ ಬೆಡ್ಗಳು, ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್ ಇಲ್ಲದೆ ಜನರು ಚಿಕಿತ್ಸೆ ಪಡೆಯದೆ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ ಸೋಂಕು ವ್ಯಾಪಕವಾಗಿ ಹರಡಿ ಸೋಂಕಿತರ ಸಂಖ್ಯೆ ಹೆಚ್ಚಿದರೆ ಅದನ್ನು ಎದುರಿಸಲು ನಮ್ಮ ರಾಜ್ಯ ಸರಕಾರಕ್ಕೆ ಅಸಾಧ್ಯವಾಗಲಿದೆ ಎಂದಿದ್ದಾರೆ.
ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸೋಂಕನ್ನು ಇನ್ನಷ್ಟೂ ವೇಗವಾಗಿ ಹರಡಲು ನಾವೇ ಮಾರ್ಗ ಮಾಡಿಕೊಟ್ಟ ಹಾಗೆ ಆಗುತ್ತದೆ. ಚುನಾವಣೆ ನಡೆಸಿ ಜನತೆಯ ಜೀವವನ್ನು ಬಲಿಕೊಡುವುದು ಸರಿಯಲ್ಲ. ಈಗಾಗಲೇ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ನೀಡದೇ ಇರುವುದನ್ನು ಖಂಡಿಸಿ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಆಪ್ ಪಕ್ಷ ಆಗ್ರಹಿದೆ.