ಬೆಂಗಳೂರು: ಜಿಂದಾಲ್ ಭೂಮಿ ಪರಭಾರೆ ವಿಚಾರವಾಗಿ ಕಾಂಗ್ರೆಸ್ನಲ್ಲಿಯೇ ಭುಗಿಲೆದ್ದಿರುವ ಅಸಮಾಧಾನ ಶಮನಕ್ಕೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆದಿದ್ದ ಸಭೆಯಲ್ಲಿ ಸಚಿವ ಕೆ ಜೆ ಜಾರ್ಜ್ ಹಾಗೂ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಪಾಲ್ಗೊಂಡಿದ್ದರು. ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆ ಸಭೆಯನ್ನು ನಾಳೆ ವಿಧಾನಸೌಧದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ನಾಳೆ ಸಚಿವ ಕೆಜೆ ಜಾರ್ಜ್ ಅವರು ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಲಿದ್ದು, ಅಲ್ಲಿ ಹೆಚ್ ಕೆ ಪಾಟೀಲ್ ನೀಡಿರುವ ಮಾಹಿತಿ ಹಾಗೂ ಅಭಿಪ್ರಾಯವನ್ನು ವಿವರಿಸಲಿದ್ದಾರೆ. ಸಿಎಂ ಕೈಗೊಳ್ಳುವ ನಿರ್ಧಾರ ಆಧರಿಸಿ ಜಿಂದಾಲ್ಗೆ 3667 ಎಕರೆ ಭೂಮಿ ಪರಭಾರೆ ವಿಚಾರ ಇನ್ನೊಂದು ಹಂತದ ಸ್ಪಷ್ಟತೆ ಪಡೆದುಕೊಳ್ಳಲಿದೆ.
ಸಭೆ ವಿಫಲಕ್ಕೆ ಕಾರಣ:
ಮಾಜಿ ಸಚಿವ ಹೆಚ್ ಕೆ ಪಾಟೀಲ್ ತಮ್ಮ ವಾದಕ್ಕೆ ಕಟ್ಟುಬಿದ್ದ ಹಿನ್ನೆಲೆ ಇವರನ್ನು ಮನವೊಲಿಸುವಲ್ಲಿ ಕೆ ಜೆ ಜಾರ್ಜ್ ಮತ್ತು ದಿನೇಶ್ ಗುಂಡೂರಾವ್ ವಿಫಲರಾದರು. ಇದರಿಂದಾಗಿ ಇಂದಿನ ಸಭೆ ವಿಫಲವಾಗಿದ್ದು, ನಾಳೆ ವಿಧಾನಸೌಧದಲ್ಲಿ ಇನ್ನೊಂದು ಹಂತದ ಮಾತುಕತೆ ನಡೆಯಲಿದೆ. ಅಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಾಂಗ್ರೆಸ್ ನಾಯಕರ ಪತ್ರ ಸಮರ ಹಾಗೂ ಸಾಮಾಜಿಕ ಜಾಲತಾಣಗಳ ಸಮರ ಒಂದು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ.
ಸಭೆಯ ನಂತರದ ಪ್ರತಿಕ್ರಿಯೆ:
ದಿನೇಶ್ ಗುಂಡೂರಾವ್ ಮಾತನಾಡಿ, ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಸಭೆ ನಡೆಸಿದ್ದೇನೆ. ಜಿಂದಾಲ್ಗೆ ರಾಜ್ಯ ಸಮ್ಮಿಶ್ರ ಸರ್ಕಾರದಿಂದ ನೀಡಲಾದ ಜಮೀನಿನ ವಿಚಾರವಾಗಿ ಪಾಟೀಲರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನೇರವಾಗಿ ಸರ್ಕಾರಕ್ಕೆ ಪತ್ರ ಬರೆದು ಒಂದಿಷ್ಟು ಮಾಹಿತಿ ಒದಗಿಸಿದ್ದು, ಆ ವಿಚಾರವಾಗಿ ಚರ್ಚೆ ನಡೆದಿದೆ. ಈ ಸಂದರ್ಭ ಜಾರ್ಜ್ ಅವರು ಹೆಚ್ ಕೆ ಪಾಟೀಲರಿಗೆ ಇದ್ದ ಅನುಮಾನಗಳನ್ನು ದೂರ ಪಡಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಒಂದು ಒಳ್ಳೆಯ ನಿರ್ಧಾರ ಆಗಬೇಕಿರುವ ಹಿನ್ನೆಲೆ ಉತ್ತಮ ಮಾತುಕತೆ ನಡೆಸಿದ್ದೇವೆ ಎಂದರು.
ಹೆಚ್ ಕೆ ಪಾಟೀಲ್ ಮಾತನಾಡಿ, ನಾನು ಇಂದು ಸಂಪೂರ್ಣ ವಿವರವನ್ನು ಸಚಿವ ಜಾರ್ಜ್ ಅವರ ಗಮನಕ್ಕೆ ತಂದಿದ್ದೇನೆ. ಇದೇ ಸಂದರ್ಭ ಅವರು ತಮ್ಮ ವಿಚಾರಗಳನ್ನು ತಿಳಿಸಿದ್ದಾರೆ. ಪರಸ್ಪರ ಮಾತುಕತೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷರು ಹೇಳಿದ ಹಾಗೆ ರಾಜ್ಯದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ ಕೈಗೊಳ್ಳುವ ಕಾರ್ಯ ಮಾಡುತ್ತೇವೆ. ನಾಳೆ ಸಂಜೆಯ ಹೊತ್ತಿಗೆ ಇದಕ್ಕೊಂದು ಸ್ಪಷ್ಟ ಉತ್ತರ ದೊರಕಲಿದೆ. ರಾಜ್ಯದ ಹಿತಕ್ಕೆ ಮಾರಕವಲ್ಲದ ನಿರ್ಧಾರವನ್ನು ರಾಜ್ಯ ಸಮ್ಮಿಶ್ರ ಸರ್ಕಾರ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.