ಬೆಂಗಳೂರು: ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಯ ಮನೆಯನ್ನು ಕಂಟೇನ್ಮೆಂಟ್ ಮಾಡುವ ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಆದರೆ, ಹೋಂ ಐಸೋಲೇಷನ್ನಲ್ಲಿರುವವರು ಮನೆಗೆ ಹಾಕಿರುವ ಭಿತ್ತಿಪತ್ರವನ್ನು ಹರಿದು ಹಾಕಿ ನಿಯಮ ಉಲ್ಲಂಘಟಿಸಿದ್ದಾರೆ ಎನ್ನಲಾಗುತ್ತಿದೆ.
ಮಂಜುನಾಥ ನಗರದ 5ನೇ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಒಂದು ಮನೆಯಲ್ಲಿ 8 ಸದಸ್ಯರು ಹಾಗೂ ಇನ್ನೊಂದು ಮನೆಯಲ್ಲಿ 4 ಸದಸ್ಯರು ಹೋಂ ಐಸೋಲೇಷನ್ನಲ್ಲಿದ್ದಾರೆ. ಮನೆಯಲ್ಲೇ ಆರೈಕೆ ಪಡೆಯುತ್ತಿದ್ದಾರೆ. ಹೀಗಾಗಿ 14 ದಿನ ಮನೆಗೆ ಯಾರೂ ಭೇಟಿ ನೀಡದಿರಿ ಎಂದು ಬರೆದಿರುವ ಜಾಗೃತಿಯ ಭಿತ್ತಿಪತ್ರವನ್ನು ಮನೆಯವರೇ ಹರಿದುಹಾಕುವ ಮೂಲಕ ನಿಯಮ ಉಲ್ಲಂಘಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಮಂಜುನಾಥ ನಗರದ ಆರೋಗ್ಯಾಧಿಕಾರಿಗಳು ಸೋಂಕಿತರಿಗೆ ಎಚ್ಚರಿಕೆ ನೀಡಿದರು. ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಭಿತ್ತಿಪತ್ರ ಹಾಕಲಾಗಿದೆ. ಮತ್ತೊಮ್ಮೆ ಈ ರೀತಿ ಪೋಸ್ಟರ್ ಹರಿದು ಹಾಕಿದರೆ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭಿತ್ತಿಪತ್ರ ಹರಿದ ಕಡೆ ಮತ್ತೆ ಅಂಟಿಸಲಾಗಿದೆ. ಒಟ್ಟಿನಲ್ಲಿ ನೆರೆ-ಹೊರೆಯವರಿಂದ ಮುಜುಗರ ಉಂಟಾಗುತ್ತದೆ ಎಂಬ ಕಾರಣಕ್ಕೆ ಪಾಸಿಟಿವ್ ಬಂದವರು ಈ ರೀತಿ ನಿಯಮ ಉಲ್ಲಂಘನೆಗೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.