ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಆದ ಹಿನ್ನಡೆ ಅರಿಯಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ “ಸತ್ಯ ಶೋಧನಾ ಸಮಿತಿ' ರಚಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣ ಹಾಗೂ ಪಕ್ಷದ ಬಗ್ಗೆ ಜನರಲ್ಲಿರುವ ಅನಿಸಿಕೆಯನ್ನು ಕೂಲಂಕಶವಾಗಿ ತಿಳಿದುಕೊಳ್ಳಲು ಪ್ರದೇಶ ಕಾಂಗ್ರೆಸ್ ಸಮಿತಿ ರಚಿಸಿದ್ದು, ಕೂಡಲೇ ತಂಡ ಕಾರ್ಯಪ್ರವೃತ್ತವಾಗುವಂತೆ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಸಮಿತಿಯಲ್ಲಿ ಯಾರ್ಯಾರು?
ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ವೀರಕುಮಾರ್ ಪಾಟೀಲ್, ನಜೀರ್ ಅಹ್ಮದ್, ಮಾಜಿ ಸಂಸದ ದೃವನಾರಾಯಣ ಸತ್ಯ ಶೋಧನಾ ಸಮಿತಿ ಸದಸ್ಯರಾಗಿದ್ದಾರೆ.
ಇವರು ಪ್ರತಿ ಜಿಲ್ಲೆಗೂ ಭೇಟಿ ನೀಡಿ ಅಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರವಾರು ಸಭೆ ನಡೆಸಿ, ಭೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಮುಖಂಡರನ್ನು ಭೇಟಿ ಮಾಡಿ, ಪಕ್ಷಕ್ಕೆ ಹಾಗೂ ಅಭ್ಯರ್ಥಿಗೆ ಹಿನ್ನಡೆ ಆಗಲು ಕಾರಣ ತಿಳಿದುಕೊಳ್ಳುವುದು ಹಾಗು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಲು ಅಗತ್ಯ ಸಲಹೆ ಸ್ವೀಕರಿಸುವ ಕಾರ್ಯ ಮಾಡಬೇಕೆಂದು ಸೂಚಿಸಲಾಗಿದೆ. ಇದಾದ ಬಳಿಕ ಸಮಗ್ರ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚಿಸಿದ್ದು, ವರದಿ ಸಲ್ಲಿಕೆಗೆ ಯಾವುದೇ ಅಂತಿಮ ದಿನಾಂಕ ಸೂಚಿಸಿಲ್ಲ.