ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ ಕಾಂಗ್ರೆಸ್ ಮತ್ತು ಜೆಡಿಎಸ್ನ 17 ಮಂದಿ ಅನರ್ಹ ಶಾಸಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಅನರ್ಹತೆ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ.
ಜುಲೈ 1 ರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನ 17 ಶಾಸಕರ ರಾಜೀನಾಮೆಯಿಂದ ಪ್ರಾರಂಭವಾಗಿದ್ದ ಕರ್ನಾಟಕ ರಾಜಕೀಯ ಪರ್ವ ಜುಲೈ 22 ಕ್ಕೆ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆಯಲ್ಲಿ ಸೋಲು ಕಾಣುವವರೆಗೆ ಮುಂದುವರಿಯಿತು. ಆಪರೇಷನ್ ಕಮಲದ ಕರಿಛಾಯೆಯಡಿಯೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಹಿಡಿಯಿತು.
ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ 17 ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತ ಶಾಸಕರು ಬಳಿಕ ಅನರ್ಹತೆಯ ಹಣೆಪಟ್ಟಿ ಪಡೆದರು. ಅಂದಿನ ಸ್ಪೀಕರ್ ರಮೇಶ್ ಕುಮಾರ್ ಪಕ್ಷಾಂತರ ಕಾಯ್ದೆಯಡಿ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಆ ಮೂಲಕ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು, ಆನಂದ್ ಸಿಂಗ್, ಬಿ.ಸಿ.ಪಾಟೀಲ್, ರೋಷನ್ ಬೇಗ್, ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಶಿವರಾಮ್ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ್, ಶ್ರೀಮಂತ್ ಪಾಟೀಲ್, ಆರ್.ಶಂಕರ್ ಹಾಗೂ ಜೆಡಿಎಸ್ನ ಹೆಚ್.ವಿಶ್ವನಾಥ್, ನಾರಾಯಣಗೌಡ, ಕೆ.ಗೋಪಾಲಯ್ಯ ಅನರ್ಹತೆಗೊಳಗಾದರು.
ಅಲ್ಲಿಂದೀಚೆಗೆ ಅನರ್ಹತೆಯ ಹಣೆಪಟ್ಟಿಯೊಂದಿಗೆ ಮತ್ತು ರಾಜಕೀಯ ಭವಿಷ್ಯದ ಅನಿಶ್ಚಿತತೆಯೊಂದಿಗೆ ಕಾನೂನು ಹೋರಾಟದಲ್ಲಿ ತೊಡಗಿದ್ದ 17 ಅನರ್ಹರು ಅಕ್ಷರಶಃ ರಾಜಕೀಯ ವನವಾಸವನ್ನೇ ಅನುಭವಿಸಿದ್ದರು.
17 ಅತೃಪ್ತರ ರಾಜೀನಾಮೆ ಪತ್ರ ಸಲ್ಲಿಕೆಯಿಂದ ಹಿಡಿದು ಅನರ್ಹತೆ ಆದೇಶ, ಸರ್ಕಾರ ಪತನ, ಬಿಜೆಪಿ ಸರ್ಕಾರ ರಚನೆವರೆಗಿನ ರಾಜ್ಯ ರಾಜಕೀಯ ಪರ್ವದ ಹಿನ್ನೋಟ ಹೀಗಿದೆ:
- ಜುಲೈ1: ವಿಜಯನಗರ ಕೈ ಶಾಸಕ ಆನಂದ್ ಸಿಂಗ್ ರಾಜೀನಾಮೆ ಪತ್ರ ಸಲ್ಲಿಕೆ.
- ಜುಲೈ 6: ಕಾಂಗ್ರೆಸ್ ನ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಪ್ರತಾಪ್ ಗೌಡ ಪಾಟೀಲ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು, ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್ ಹಾಗು ಜೆಡಿಎಸ್ ನ ಹೆಚ್.ವಿಶ್ವನಾಥ್, ನಾರಾಯಣ ಗೌಡ ಮತ್ತು ಗೋಪಾಲಯ್ಯ ಸಾಮೂಹಿಕವಾಗಿ ವಿಧಾನಸೌಧದಲ್ಲಿನ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಕೆ, ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಕೆ. ರಾಜೀನಾಮೆ ಪತ್ರ ನೀಡಿ ರಾಜ ಭವನದಿಂದ ಹೆಚ್ಎಎಲ್ ಮೂಲಕ ವಿಶೇಷ ವಿಮಾನದಿಂದ ಮುಂಬೈಗೆ ತೆರಳಿದ ಅತೃಪ್ತರು.
- ಜುಲೈ 8: ಪಕ್ಷೇತರ ಅಭ್ಯರ್ಥಿ ನಾಗೇಶ್ ಹಾಗೂ ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ, ಮೈತ್ರಿಗೆ ನೀಡಿದ ಬೆಂಬಲ ವಾಪಸ್.
- ಜುಲೈ 9: ಕೈ ಶಾಸಕ ರೋಷನ್ ಬೇಗ್ ರಾಜೀನಾಮೆ ಪತ್ರ ಸಲ್ಲಿಕೆ. ತಡರಾತ್ರಿ ಮುಂಬೈ ರಿನಾಯ್ಸೆನ್ಸ್ ಹೊಟೇಲ್ನಲ್ಲಿ ತಂಗಿದ್ದ ಅತೃಪ್ತ ಶಾಸಕರು ಆಗಿನ ಸಿಎಂ ಕುಮಾರಸ್ವಾಮಿ ಅವರಿಂದ ಪ್ರಾಣ ಬೆದರಿಕೆ ಇದೆ ಎಂದು ಆರೋಪಿಸಿ ಮುಂಬೈ ಪೊಲೀಸ್ ಆಯುಕ್ತರಿಗೆ ದೂರು.
- ಜುಲೈ 10: ಬೆಳಗ್ಗೆ ಡಿ.ಕೆ.ಶಿವಕುಮಾರ್, ಜೆಡಿಎಸ್ ನ ಶಾಸಕರದ ಶಿವಲಿಂಗೇಗೌಡ, ಜಿ.ಟಿ.ದೇವೇಗೌಡ ಜತೆಗೂಡಿ ಮುಂಬೈಗೆ ದೌಡು. ಅತೃಪ್ತ ಶಾಸಕರನ್ನು ಅವರು ತಂಗಿದ್ದ ರಿನಾಯ್ಸೆನ್ಸ್ ಹೋಟೆಲ್ ನಲ್ಲಿ ಭೇಟಿಯಾಗಲು ಯತ್ನ. ಭೇಟಿಗೆ ಅವಕಾಶ ನೀಡದೆ, ಡಿ.ಕೆ.ಶಿವಕುಮಾರ್ ಅವರನ್ನ ವಶಪಡಿಸಿಕೊಂಡ ಮುಂಬೈ ಪೊಲೀಸರು. ಸ್ಪೀಕರ್ ಅವರು ರಾಜೀನಾಮೆ ಪತ್ರ ಸ್ವೀಕರಿಸಲು ವಿಳಂಬ ಮಾಡುತ್ತಿದ್ದು, ಸ್ಪೀಕರ್ ಗೆ ನಿರ್ದೇಶನ ನೀಡುವಂತೆ ಕೋರಿ ಅತೃಪ್ತರಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ. ಸಂಜೆ ಕೈ ಶಾಸಕರಾದ ಡಾ.ಕೆ.ಸುಧಾಕರ್ ಹಾಗು ಎಂ.ಟಿ.ಬಿ.ನಾಗರಾಜ್ ರಿಂದ ಸ್ಪೀಕರ್ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಕೆ. ರಾಜೀನಾಮೆ ನೀಡಿ ವಿಧಾನಸೌಧದಿಂದ ತೆರಳುತ್ತಿದ್ದ ಡಾ.ಸುಧಾಕರ್ ರನ್ನು ಮೂರನೇ ಮಹಡಿಗೆ ಎಳೆದೊಯ್ದ ಕಾಂಗ್ರೆಸ್ ನಾಯಕರು. ಸುಧಾಕರ್ ಮೇಲೆ ಹಲ್ಲೆ ಆರೋಪ. ಕೆ.ಜೆ.ಜಾರ್ಜ್ ಕೊಠಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಸುಧಾಕರ್ ಮನವೊಲಿಕೆ ಯತ್ನ. ಬಿಜೆಪಿ ನಾಯಕರು ವಿಧಾನಸೌಧದ ಮೂರನೇ ಮಹಡಿಗೆ ದೌಡು, ಹೈಡ್ರಾಮ
- ಜುಲೈ 11: ಅತೃಪ್ತ ಶಾಸಕರು ಖುದ್ದು ಸ್ಪೀಕರ್ ಅವರನ್ನು ಸಂಜೆ 6 ಗಂಟೆಯೊಳಗೆ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ. ಪಕ್ಷಾಂತರ ವಿರೋಧಿ ಕಾಯ್ದೆಯಡಿ ಕೈ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಂದ ಸ್ಪೀಕರ್ ಗೆ ದೂರು. ಸಂಜೆ ಮುಂಬೈಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ಅತೃಪ್ತ ಶಾಸಕರಿಂದ ವಿಧಾನಸೌಧದಲ್ಲಿ ಸ್ಪೀಕರ್ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಕೆ. ಬಳಿಕ ವಿಶೇಷ ವಿಮಾನದಲ್ಲಿ ಮುಂಬೈಗೆ ವಾಪಸ್ಸಾದ ಅತೃಪ್ತರು. ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ನಿಂದ ಕೈ ಶಾಸಕರಿಗೆ ವಿಪ್ ಜಾರಿ.
- ಜುಲೈ 14: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಸತತ ಮನವೊಲಿಕೆ ಹೊರತಾಗಿಯೂ ಆರ್.ಅಶೋಕ್, ಯಡಿಯೂರಪ್ಪ ಆಪ್ತ ಸಂತೋಷ್ ಜೊತೆಗೆ ಮುಂಬೈಗೆ ಹಾರಿದ ಎಂಟಿಬಿ ನಾಗರಾಜ್.
- ಜುಲೈ 16: ಎಲ್ಲ ಕಾಂಗ್ರೆಸ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು.
- ಜುಲೈ 17: ಮೂವರು ಜೆಡಿಎಸ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಗೆ ಜೆಡಿಎಸ್ ದೂರು.
- ಜುಲೈ 18: ಕಾಗವಾಡ ಕೈ ಶಾಸಕ ಶ್ರೀಮಂತ್ ಪಾಟೀಲ್ ಎದೆ ನೋವು ಕಾರಣ ಹೇಳಿ ಮುಂಬೈ ಆಸ್ಪತ್ರೆಗೆ ದಾಖಲು. ಅಧಿವೇಶನ ಪ್ರಾರಂಭ.
- ಜುಲೈ 22: ಮೂರು ದಿನಗಳ ಸುದೀರ್ಘ ಚರ್ಚೆ ಬಳಿಕ ಸಂಜೆ ಅಂದಿನ ಸಿಎಂ ಹಡಚ್.ಡಿ.ಕುಮಾರಸ್ವಾಮಿ ಅವರಿಂದ ವಿಶ್ವಾಶ ಮತಯಾಚನೆ ಪ್ರಸ್ತಾಪ ಮಂಡನೆ. ವಿಶ್ವಾಸ ಮತಗಳಿಸುವಲ್ಲಿ ವಿಫಲಗೊಂಡ ಕಾರಣ ಮೈತ್ರಿ ಸರ್ಕಾರ ಪತನ.
- ಜುಲೈ 25: ಸ್ಪೀಕರ್ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ, ಆರ್.ಶಂಕರ್ ಅನರ್ಹಗೊಳಿಸಿ ಆದೇಶ.
- ಜುಲೈ 28: ಸ್ಪೀಕರ್ ಉಳಿದ 11 ಕಾಂಗ್ರೆಸ್ ರೆಬೆಲ್ ಶಾಸಕರು ಮತ್ತು 3 ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಿ ಆದೇಶ.
- ಜುಲೈ 29: ರಮೇಶ್, ಕುಮಟಳ್ಳಿ ಮತ್ತು ಆರ್.ಶಂಕರ್ ಅವರಿಂದ ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ.
- ಜುಲೈ 30: 14 ಕಾಂಗ್ರೆಸ್ ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್.
- ಜುಲೈ 31: ಮೂರು ಅನರ್ಹ ಜೆಡಿಎಸ್ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿದ ಜೆಡಿಎಸ್.
- ಅಗಸ್ಟ್ 1: ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ಅನರ್ಹ ಶಾಸಕರು.
- ಅಕ್ಟೋಬರ್ 13: ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್, 2023ರವರೆಗಿನ ಸ್ಪರ್ಧೆಗೆ ತಡೆಯೊಡ್ಡಿದ್ದ ಸ್ಪೀಕರ್ ತೀರ್ಮಾನ ತಳ್ಳಿಹಾಕಿದೆ ಸುಪ್ರೀಂ. ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ನ್ಯಾಯಮೂರ್ತಿ ಎನ್.ವಿ. ರಮಣ, ಸಂಜೀವ್ ಖನ್ನಾ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠದಿಂದ ತೀರ್ಪು ಪ್ರಕಟ.