ಬೆಂಗಳೂರು: ಸಚಿವ ಡಾ.ಕೆ. ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಪಕ್ಷೀಯರು ಸಚಿವ ಸುಧಾಕರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸುಧಾಕರ್ ಹೇಳಿಕೆ ರಾಜಕೀಯವಾಗಿ ತೀವ್ರ ಕಿಡಿ ಹೊತ್ತಿಸಿದೆ.
'ನಾನು ಏಕಪತ್ನಿ ವ್ರತಸ್ಥ':
ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾನು ಏಕಪತ್ನಿ ವ್ರತಸ್ಥ. ನನಗೆ ಒಂದೇ ಹೆಂಡತಿ, ಒಂದೇ ಸಂಸಾರ ಇರುವುದು ಎಂದು ತಿಳಿಸಿದ್ದಾರೆ. ಇಂತಹ ನುಡಿಮುತ್ತುಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಅವನು ಏನೇ ಹೇಳಲಿ ನನಗೆ ಒಬ್ಬಳೇ ಹೆಂಡತಿ ಒಂದೇ ಸಂಸಾರ. ಉಳಿದದ್ದು ಒಳಗೆ ಚರ್ಚೆ ಮಾಡುತ್ತೇನೆ. ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿ ಇದನ್ನು ಸದನದಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲ ಸದಸ್ಯರ ಮೇಲೆ ಆರೋಪ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಎಲ್ಲರ ಮೇಲೂ ತನಿಖೆ ನಡೆಯಲಿ:
ಸತೀಶ್ ಜಾರಕಿಹೊಳಿ ಮಾತನಾಡುತ್ತಾ, ಜವಾಬ್ದಾರಿ ಸ್ಥಾನದಲ್ಲಿದ್ದವರು ಹೇಳಿದ್ದಾರೆ. ಹಾಗಾದರೆ ಎಲ್ಲರ ಮೇಲೂ ತನಿಖೆ ನಡೆಯಲಿ. ಸತ್ಯ ಶೋಧನ ಕಮಿಟಿ ರಚನೆ ಮಾಡಲಿ. ಇವರು ಹೇಳಿದ್ದಾರಲ್ಲ ಮುಖ್ಯಮಂತ್ರಿಗಳು ತನಿಖೆ ಮಾಡಲಿ. ಎಲ್ಲ 225 ಜನರ ಮೇಲೂ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ರಾಮನ ದೇವಸ್ಥಾನಕ್ಕೆ ಹೋಗಿ ಬರಲಿ:
ಇದೇ ವೇಳೆ, ಮಾತನಾಡಿದ ಹೆಚ್. ಡಿ. ರೇವಣ್ಣ, ಡಬ್ಬಲ್ ಇಂಜಿನ್ ಸರ್ಕಾರ ಇದೆ. ಕೇಂದ್ರದಲ್ಲೂ ಇವರೇ, ರಾಜ್ಯದಲ್ಲೂ ಇವರೇ, ತನಿಖೆ ನಡೆಯಲಿ. ಅಗತ್ಯ ಬಿದ್ದರೆ ರಾಮನ ದೇವಸ್ಥಾನಕ್ಕೆ ಹೋಗಿ ಬರಲಿ. ತನಿಖೆ ಮಾಡಲಿ ಬಿಡಿ ಎಂದು ಆಗ್ರಹಿಸಿದರು.
ಅವರಿಗೆ ಮಾಡೋಕೆ ಏನೂ ಕೆಲಸ ಇಲ್ವಾ?
ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕಿ ಸೌಮ್ಯ ರೆಡ್ಡಿ, ಅವರಿಗೆ ಮಾಡೋಕೆ ಏನೂ ಕೆಲಸ ಇಲ್ವಾ?. ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಅಂತ ನಾವು ಪ್ರತಿಭಟನೆ ಮಾಡುತ್ತಿರೋದು. ನಾವು ಏಕೆ ಪ್ರತಿಭಟನೆ ಮಾಡ್ತಾ ಇದ್ದೇವೆ ಅಂತ ಅರ್ಥ ಮಾಡಿಕೊಳ್ಳಲಿ. ಯಾರೇ ಆಗಲಿ ಸಿಬಿಐಗೆ ಹೋಗಲಿ. ಒಬ್ಬರ ಪರ್ಸನಲ್ ವಿಚಾರಕ್ಕೆ ಅಲ್ಲ ಪ್ರತಿಭಟನೆ ಮಾಡ್ತಾ ಇರೋದು. ಸುಧಾಕರ್ ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ಸ್ವಪಕ್ಷೀಯರಿಂದಲೂ ಆಕ್ಷೇಪ:
ಸುಧಾಕರ್ ಹೇಳಿಕೆ ಸಂಬಂಧ ಸ್ವಪಕ್ಷೀಯರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಅದು ಸುಧಾಕರ್ ಅವರ ವೈಯಕ್ತಿಕ ವಿಚಾರ. ಹೇಳಿಕೆ ಕೊಡೋ ಸಮಯದಲ್ಲಿ ಸ್ಪಷ್ಟವಾಗಿ ಹೇಳಬೇಕು. ಇಂತವರು ಇಂತವರು ಅಂತ ಹೇಳಬೇಕು. 224 ಜನ ಅಂತ ಹೇಳೋದು ಸರಿಯಲ್ಲ ಎಂದು ಬಿಜೆಪಿ ಶಾಸಕ ರಾಜೂಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಅವರು ಮಂತ್ರಿ ಇದ್ದಾರೆ, ನಾವೆಲ್ಲ ಶಾಸಕರು ಇದ್ದೇವೆ. ಅವರ ಹೇಳಿಕೆಯನ್ನು ವಾಪಸ್ ಪಡೆಯಬೇಕು. ನಾವು ಸಾಮಾನ್ಯ ಜನರಂತಲ್ಲ. ನಮಗೂ ಜವಾಬ್ದಾರಿ ಇದೆ. ಶಾಸಕರಾಗಿ ನಮ್ಮದೇ ಆದ ಜವಾಬ್ದಾರಿ ಇರುತ್ತದೆ. ಇಂತಹ ಹೇಳಿಕೆಯನ್ನು ಅವರು ಕೊಡಬಾರದು ಎಂದರು.
ಇದನ್ನೂ ಓದಿ: ಮಾಜಿ ಸಂಸದ ವಿರೂಪಾಕ್ಷಪ್ಪ ಸದಾ ಹಾರುತ್ತಲೇ ಇರುವ ಪಕ್ಷಿ: ಧ್ರುವ ನಾರಾಯಣ
ಇಂತಹ ಹೇಳಿಕೆ ನೀಡಿರುವುದು ತಪ್ಪು ಎಂದು ಸಚಿವೆ ಶಶಿಕಲಾ ಜೊಲ್ಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಅವರ ಹೇಳಿಕೆಯನ್ನು ಇನ್ನೂ ನೋಡಿಲ್ಲ. ಆ ರೀತಿ ಹೇಳಿಕೆ ಕೊಡುವುದು ತಪ್ಪು. ಎಲ್ಲರ ಕುರಿತು ಆ ರೀತಿ ಹೇಳುವುದು ಸರಿಯಲ್ಲ. ನಾವು ಮಹಿಳಾ ಶಾಸಕರೂ ಇದ್ದೇವೆ. ಎಲ್ಲರ ಕುರಿತು ಆಪಾದನೆ ಮಾಡುವುದು ಸರಿಯಲ್ಲ ಎಂದರು.