ಬೆಂಗಳೂರು: ಜಿಂದಾಲ್ಗೆ ರಾಜ್ಯ ಸಮ್ಮಿಶ್ರ ಸರ್ಕಾರದಿಂದ ಭೂಮಿ ಪರಭಾರೆ ಮಾಡಿರುವ ಸಂಬಂಧ ಕಾಂಗ್ರೆಸ್ ನಾಯಕರ ನಡುವೆ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲು ಕೆಪಿಸಿಸಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪ್ರಮುಖ ನಾಯಕರ ಸಭೆ ಕರೆಯಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಗೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗಮಿಸಿದ್ದು, ಅಧ್ಯಕ್ಷರ ಜೊತೆ ಚರ್ಚೆ ಆರಂಭಿಸಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಳೆದ ಕೆಲ ದಿನಗಳಿಂದ ಹೆಚ್.ಕೆ.ಪಾಟೀಲ್ ಅವರು ಪಕ್ಷ ಹಾಗೂ ಸರ್ಕಾರದ ನಿಲುವು ಖಂಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ, ಸಚಿವ ಕೃಷ್ಣಬೈರೇಗೌಡ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜಿಂದಾಲ್ ಭೂಮಿ ಪರಭಾರೆ ಸಂಬಂಧ ನಿರ್ಧಾರ ಕೈಗೊಂಡಿರುವ ಪ್ರತಿಯೊಬ್ಬರಿಗೂ ಪತ್ರ ಬರೆಯುತ್ತಿದ್ದಾರೆ. ಇದರಿಂದ ಮೈತ್ರಿ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟು ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಧ್ಯಸ್ಥಿಕೆಯಲ್ಲಿ ಈ ವಿಚಾರಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ಮುಂದಾಗಿದ್ದಾರೆ.
ಇದಕ್ಕಾಗಿಯೇ ಅತ್ಯಂತ ಮಹತ್ವದ ಸಭೆಯನ್ನು ದಿನೇಶ್ ಗುಂಡೂರಾವ್ ಕರೆದಿದ್ದು, ಸಮ್ಮಿಶ್ರ ಸರ್ಕಾರದ ನಿರ್ಧಾರದ ಪರವಾಗಿ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟೀಕರಣ ನೀಡಲಿದ್ದಾರೆ. ಇದೇ ಸಂದರ್ಭ ಹೆಚ್.ಕೆ.ಪಾಟೀಲರು ತಮ್ಮ ಮಾಹಿತಿ ಹಾಗೂ ದಾಖಲೆಗಳನ್ನು ಪಕ್ಷದ ಅಧ್ಯಕ್ಷರ ಮುಂದಿಡಲಿದ್ದಾರೆ. ಉಭಯ ನಾಯಕರು ತಮ್ಮ ಬಳಿ ಇರುವ ದಾಖಲೆಯನ್ನು ದಿನೇಶ್ ಗುಂಡೂರಾವ್ ಅವರ ಮುಂದಿಡಲಿದ್ದಾರೆ. ಉಭಯ ನಾಯಕರಲ್ಲಿ ಮಾಹಿತಿ ಪಡೆದ ನಂತರ ಅಧ್ಯಕ್ಷರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ಏನಿದು ಭೂಮಿ ಪರಭಾರೆ?
ಜಿಂದಾಲ್ಗೆ ರಾಜ್ಯ ಸಮ್ಮಿಶ್ರ ಸರ್ಕಾರ ಕಳೆದ ಸಚಿವ ಸಂಪುಟ ಸಭೆಯಲ್ಲಿ 3669 ಎಕರೆ ಭೂಮಿ ಪರಭಾರೆ ಮಾಡುವ ತೀರ್ಮಾನ ಕೈಗೊಂಡಿತ್ತು. ಸಂಪುಟದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹೆಚ್.ಕೆ.ಪಾಟೀಲ್ರು ತಮ್ಮ ಹೋರಾಟ ಆರಂಭಿಸಿದ್ದರು. ಹೆಚ್ಕೆಪಿ ಅಸಮಾಧಾನದಿಂದ ಬಿಜೆಪಿ ಕೂಡ ಹೋರಾಟ ಕೈಗೆತ್ತಿಕೊಂಡಿತ್ತು. ಇದರಿಂದ ಪಕ್ಷ, ಸರ್ಕಾರಕ್ಕೂ ಮುಜುಗರ ತಂದಿತ್ತು. ಹೀಗಾಗಿ ಇಬ್ಬರ ನಡುವೆ ಸಂಧಾನಕ್ಕೆ ಮುಂದಾದ ದಿನೇಶ್, ಸಭೆ ಕರೆದಿದ್ದಾರೆ.