ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಶಕ್ತಿಯನ್ನು ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಮಹಿಳೆಯರು ಶೇ. 50ರಷ್ಟು ಮತ ಹೊಂದಿದ್ದರೂ ರಾಜಕೀಯ ಪಕ್ಷಗಳು 28 ಕ್ಷೇತ್ರಗಳಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ನೀಡಿವೆ.
ಬಿಜೆಪಿಯು ಶೋಭಾ ಕರಂದ್ಲಾಜೆ ಅವರಿಗೆ ಚಿಕ್ಕಮಗಳೂರು -ಉಡುಪಿ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ವೀಣಾ ಕಾಶಪ್ಪನವರ್ ಅವರಿಗೆ ಬಾಗಲಕೋಟೆಯಿಂದ ಟಿಕೆಟ್ ನೀಡಿದೆ. ಜೆಡಿಎಸ್ ಪಕ್ಷ ಡಾ. ಸುನಿತಾ ದೇವಾನಂದ ಚೌಹಾಣ್ಗೆ ಸ್ಪರ್ಧಿಸಲು ಟಿಕೆಟ್ ದಯಪಾಲಿಸಿದೆ. ಈ ಮೂಲಕ ಮಹಿಳೆಯರ ಪರ ತಮಗಿರುವ ಧೋರಣೆಯನ್ನು ರಾಜಕೀಯ ಪಕ್ಷಗಳು ಮೆರೆದಿವೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡಬೇಕೆನ್ನುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗದೆ ನನೆಗುದಿಗೆ ಬಿದ್ದಿದೆ.
ರಾಜ್ಯಸಭೆ ಮಹಿಳಾ ಮೀಸಲಾತಿ ಮಸೂದೆಗೆ 2010ರ ಮಾ. 5ರಂದೇ ಅಸ್ತು ಎಂದರೆ ಲೋಕಸಭೆಯಲ್ಲಿ ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸದೆ ಮಸೂದೆಗೆ ಒಪ್ಪಿಗೆ ಕೊಡದೆ ಅಂಗೀಕಾರವಾಗುವುದು ಬಾಕಿಯಿದೆ. ಮಹಿಳೆಯರಿಗೆ ಟಿಕೆಟ್ ನೀಡಿದರೆ ಅವರು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎನ್ನುವ ಕಾರಣಕ್ಕೆ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಲು ಆಸಕ್ತಿ ತೋರಿಸಿಲ್ಲವೆಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಬಹಳಷ್ಟು ಆಸಕ್ತಿ ತೋರಿಸಿ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಚುನಾವಣೆ ಪ್ರಚಾರ ಸಹ ಆರಂಭಿಸಿದ್ದರು. ಕೊನೆ ಕ್ಷಣದಲ್ಲಿ ಬಿಜೆಪಿ ವರಿಷ್ಠರು ತೇಜಸ್ವಿನಿಗೆ ಟಿಕೆಟ್ ನೀಡದೆ ವಂಚನೆ ಮಾಡಿದ ಆರೋಪಕ್ಕೆ ತುತ್ತಾದರು.
ಕಾಂಗ್ರೆಸ್ ಪಕ್ಷದಲ್ಲಿ ಸಹ ಬಹಳಷ್ಟು ಮಹಿಳೆಯರು ಟಿಕೆಟ್ಗಾಗಿ ಲಾಬಿ ಮಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಹಲವರು ಹಸ್ತದ ಟಿಕೆಟ್ಗೆ ಅರ್ಜಿ ಹಾಕಿದ್ದರು. ಅಂಬರೀಶ್ ಅವರ ಪತ್ನಿ ಸುಮಲತಾ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕೇಳಿಕೊಂಡರು. ಕಾಂಗ್ರೆಸ್ ಪಕ್ಷ ಮಂಡ್ಯ ಕ್ಷೇತ್ರವನ್ನು ತನ್ನ ಮೈತ್ರಿ ಪಕ್ಷವಾದ ಜೆಡಿಎಸ್ಗೆ ಬಿಟ್ಟು ಕೊಟ್ಟು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಂದರ್ಭ ಸೃಷ್ಟಿ ಮಾಡಿತು.
ರಾಜ್ಯದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದರೂ ಅಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಟಿಕೆಟ್ ನೀಡಿಲ್ಲ. ಒಟ್ಟು 18.93 ಲಕ್ಷ ಮತದಾರರಲ್ಲಿ 9 ಲಕ್ಷ 53 ಸಾವಿರ ಮಹಿಳಾ ಮತದಾರರಿದ್ದಾರೆ. 9 ಲಕ್ಷ 39 ಸಾವಿರ ಪುರುಷರಿದ್ದಾರೆ. ಪುರುಷರಿಗಿಂತ ಸುಮಾರು 20 ಸಾವಿರದಷ್ಟು ಅಧಿಕ ಮಹಿಳಾ ಮತದಾರರಿದ್ದರೂ ಅಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿಲ್ಲ.
ಇದು ರಾಜ್ಯದ ಕತೆಯಾದರೆ ರಾಷ್ಟ್ರ ಮಟ್ಟದಲ್ಲೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿಲ್ಲ. ಪ್ರಮುಖ ರಾಜಕೀಯ ಪಕ್ಷಗಳು ತಾವು ಘೋಷಿಸಿದ 2009 ಅಭ್ಯರ್ಥಿಗಳಲ್ಲಿ ಕೇವಲ 136 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ದೇಶದ ಅತಿ ದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ 374 ಅಭ್ಯರ್ಥಿಗಳ ಪೈಕಿ 45 ಸ್ತ್ರೀಯರಿಗೆ, ಕಾಂಗ್ರೆಸ್ ಪಕ್ಷ 344 ಅಭ್ಯರ್ಥಿಗಳಲ್ಲಿ 47 ಮಹಿಳೆಯರಿಗೆ ಟಿಕೆಟ್ ನೀಡಿವೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮಾತ್ತ ಶೇ. 40.5ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. 42 ಅಭ್ಯರ್ಥಿಗಳಲ್ಲಿ 17 ಮಹಿಳಾ ಕ್ಯಾಂಡಿಡೇಟ್ಗಳಿಗೆ ಟಿಕೆಟ್ ನೀಡಿ ದೇಶದಲ್ಲೇ ಅತಿ ಹೆಷ್ಷು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿರುವ ಪಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.