ಬೆಂಗಳೂರು : ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಕೂಡದು. ಈ ವಿಚಾರದಲ್ಲಿ ರಾಜಕೀಯ ನಾಯಕರ ಹಸ್ತಕ್ಷೇಪ ಹೆಚ್ಚಾದಷ್ಟೂ ದಕ್ಷ ಆಡಳಿತ ವ್ಯವಸ್ಥೆ ಅಪಾಯಕ್ಕೆ ಸಿಲುಕಲಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಬೆಸ್ಕಾಂನ ಅಸಿಸ್ಟೆಂಟ್ ಎಂಜನಿಯರ್ ಡಿ ನವೀನ್ ಎಂಬುವರು ತಮ್ಮ ವರ್ಗಾವಣೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಮ್ ನಾಗಪ್ರಸನ್ನ (Justice M Nagaprasanna) ಅವರಿದ್ದ ಪೀಠ, ವರ್ಗಾವಣೆ ವಿಚಾರದಲ್ಲಿ ಸಚಿವರು ಹಸ್ತಕ್ಷೇಪ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಸರ್ಕಾರಿ ನೌಕರರ ವರ್ಗಾವಣೆ(Transfer of Government Employees) ಹಾಗೂ ಹುದ್ದೆ ತೋರಿಸುವ ವಿಷಯದಲ್ಲಿ ಸಚಿವರು ಅಥವಾ ರಾಜಕಾರಣಿಗಳು ಹಸ್ತಕ್ಷೇಪ ಮಾಡುವುದರಿಂದ ಸರ್ಕಾರಿ ಕಚೇರಿಗಳನ್ನು ರಾಜಕೀಕರಣಗೊಳ್ಳುತ್ತವೆ. ಅಲ್ಲದೆ, ಅಧಿಕಾರಿಗಳು ದಕ್ಷತೆವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಆಡಳಿತ ವ್ಯವಸ್ಥೆಯು ಕೃಶವಾಗುವುದರ ಜತೆಗೆ ಭವಿಷ್ಯದಲ್ಲಿ ತೀವ್ರ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಪೀಠ ರಾಜಕೀಯ ನಾಯಕರ ಹಸ್ತಕ್ಷೇಪಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇದೇ ವೇಳೆ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಸ್ಥಳೀಯ ಶಾಸಕರಿಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಹಕ್ಕು ಇರುತ್ತದೆ ನಿಜ. ಆದರೆ, ಸಚಿವರು ಮತ್ತು ರಾಜಕಾರಣಿಗಳು ಈ ಹಕ್ಕನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ, ಸಚಿವರ ಶಿಫಾರಸ್ಸಿನ ಮೇರೆಗೆ ಎಂಜನಿಯರ್ ನವೀನ್ (Engineer Naveen) ಅವರನ್ನು ವರ್ಗಾವಣೆ ಮಾಡಿ ಬೆಸ್ಕಾಂ ಹೊರಡಿಸಿದ್ದ ಆದೇಶವನ್ನು ಪೀಠ ರದ್ದುಗೊಳಿಸಿದೆ. ಜತೆಗೆ, ಅರ್ಜಿದಾರ ನವೀನ್ ಅವರಿಗೆ ಮೊದಲು ತೋರಿಸಿದ್ದ ಸ್ಥಾನದಲ್ಲಿಯೇ ಮುಂದುವರಿಸುವಂತೆ ನಿರ್ದೇಶಿಸಿದೆ.