ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಸರ್ಕಾರ ಪತನಗೊಂಡರೂ ಸುಮ್ಮನೆ ಕೂರದ ದೇವೇಗೌಡರು, ಪಕ್ಷ ಸಂಘಟನೆ ಜೊತೆಗೆ ಉಪಚುನಾವಣೆಯ ತಯಾರಿ ಕುರಿತು ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಪದ್ಮನಾಭನಗರದ ಗೌಡರ ನಿವಾಸಕ್ಕೆ ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸೇರಿದಂತೆ ಹಲವರು ಆಗಮಿಸಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಮಾತುಕತೆ ನಡೆಸಿದ್ದಾರೆ.
ಇದರ ಜೊತೆಗೆ ಕೆ.ಆರ್. ಪೇಟೆ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸುವ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಕೆ.ಆರ್. ಪೇಟೆಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಗಿದ ಅಧ್ಯಾಯ ಎಂದು ಹೇಳಿದ್ದು, ಈ ಮೂಲಕ ಉಪ ಚುನಾವಣೆಯಲ್ಲಿ 17 ಕ್ಷೇತ್ರಗಳಿಗೂ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹಾಗಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಹುತೇಕ ಅಂತ್ಯವಾಗಿದೆ ಎನ್ನಬಹುದು.