ಬೆಂಗಳೂರು: ಪ್ರಕರಣಗಳ ತನಿಖೆ ಪೂರ್ಣಗೊಳ್ಳುವ ಮುನ್ನ ಆರೋಪಿತರು-ದೂರುದಾರರ ವೈಯಕ್ತಿಕ ವಿವರ ಹಾಗೂ ಪ್ರಕರಣದ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸದಂತೆ ಅಥವಾ ಸೋರಿಕೆ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಸಂಬಂಧ ಸುತ್ತೋಲೆ ಹೊರಡಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿದೆ.
ಸುದ್ದಿ ಹೆಸರಿನಲ್ಲಿ ಅಶ್ಲೀಲ, ಅಸಭ್ಯ ಹಾಗೂ ಹಿಂಸಾತ್ಮಕ ವಿಡಿಯೋ ಪ್ರಸಾರ ಮಾಡುವುದರ ತಡೆಗೆ ಸೂಕ್ತ ನಿಯಮ ರೂಪಿಸಲು ಮತ್ತು ತನಿಖಾ ಹಂತದಲ್ಲೇ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಪೊಲೀಸರಿಗೆ ನಿರ್ದೇಶಿಸಲು ಕೋರಿ ವಕೀಲ ಎಚ್. ನಾಗಭೂಷಣ್ ರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ಪರ ವಕೀಲರು ನೀಡಿರುವ ಲಿಖಿತ ಮಾಹಿತಿಯಲ್ಲಿ, ನ್ಯಾಯಾಲಯದ ನಿರ್ದೇಶನದಂತೆ ಮಾಹಿತಿ ಸೋರಿಕೆ ಮಾಡಬಾರದು ಎಂದು ಪೊಲೀಸರಿಗೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಎಸಿಬಿ ಮತ್ತು ಲೋಕಾಯುಕ್ತ ಸಂಸ್ಥೆಗಳು ಭ್ರಷ್ಟಾಚಾರ ದೂರುಗಳನ್ನು ಆಧರಿಸಿ ದಾಳಿ ನಡೆಸಿದಾಗ ಸಂಬಂಧಪಟ್ಟವರ ಮಾಹಿತಿ ಬಹಿರಂಗಪಡಿಸಬೇಕಾಗುತ್ತದೆ. ಪ್ರಕರಣಗಳು ತನಿಖಾ ಹಂತದಲ್ಲಿರುತ್ತವೆ. ಹೀಗಾಗಿ ಸಂಬಂಧಿಸಿದ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಮತ್ತು ಸಮಗ್ರ ಸುತ್ತೋಲೆ ಹೊರಡಿಸಲು ಎರಡು ವಾರ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದರು.
ಕೋರಿಕೆ ಪರಿಗಣಿಸಿದ ಪೀಠ ತನಿಖಾ ಪ್ರಕರಣಗಳ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸದಂತೆ ಪೊಲೀಸರಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ನ್ಯಾಯಾಲಯ ಜೂನ್ 15ರಂದು ನೀಡಿರುವ ಆದೇಶ ಪಾಲನೆ ಕುರಿತು ಆಗಸ್ಟ್ 11ರೊಳಗೆ ವರದಿ ಸಲ್ಲಿಸಿ ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ.