ಬೆಂಗಳೂರು: ನೀತಿ ಸಂಹಿತೆ ಜಾರಿ ನಡುವೆಯೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 18 ಕೆಜಿ ಬೆಳ್ಳಿ ವಸ್ತುಗಳನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸರ, ಉಂಗುರ, ಕೈ ಖಡ್ಗ ಸೇರಿದಂತೆ ವಿವಿಧ ಮಾದರಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚುನ್ನಿಲಾಲ್ ಹಾಗೂ ಇಂದ್ರಕುಮಾರ್ ಎಂಬುವರು ಇಂದು ಬೆಳಗ್ಗೆ ಹಲಸೂರಿನ ಆರ್ಟಿಲರಿ ರೋಡ್ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಬೆಳ್ಳಿ ಸಾಮಾನುಗಳು ಪತ್ತೆಯಾಗಿವೆ.
ಕೂಡಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಜ್ಯೂವೆಲ್ಲರಿ ಶಾಪ್ವೊಂದಕ್ಕೆ ತೆಗದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣವಾಗಿರುವುದರಿಂದ ಠಾಣಾ ಜಾಮೀನಿನ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಬೆಳ್ಳಿ ಸಾಮಾನುಗಳನ್ನು ಮರಳಿ ಪಡೆಯಲು ಕೋರ್ಟ್ನಲ್ಲಿ ದಾಖಲಾತಿ ಒದಗಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
₹ 20 ಲಕ್ಷ ಬೆಳ್ಳಿ ವಸ್ತು ಸೀರೆ ವಶ : ಇನ್ನೊಂದೆಡೆ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 20 ಲಕ್ಷ ರೂ. ಹಾಗೂ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ 48 ಕೆಜಿ ಬೆಳ್ಳಿ, ವಿವಿಧ ಉಡುಪು, ಬಟ್ಟೆಗಳು ಸೇರಿ ಸುಮಾರು 42 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪೊಲೀಸರು ಮಾರ್ಚ್ 27ರಂದು ಜಪ್ತಿ ಮಾಡಿಕೊಂಡಿದ್ದರು.
ನೆಲಮಂಗಲ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಡಿ ಶಶಿಧರ್ ಹಾಗೂ ಸಬ್ಇನ್ಸ್ಪೆಕ್ಟರ್ಗಳಾದ ಜಯಂತಿ, ಶಮಂತ್ ಗೌಡ್ರು ಗಸ್ತಿನಲ್ಲಿದ್ದಾಗ ಬೆಂಗಳೂರು ಕಡೆಯಿಂದ ತುಮಕೂರು ಕಡೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದ 17 ಲಕ್ಷ ಹಣ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಚಾಲಕ ಅಕ್ಷಯ್ ಬಳಿ ವಿಚಾರಿಸಿದಾಗ ಯಾವುದೇ ದಾಖಲೆ ಇಲ್ಲದ್ದು ಕಂಡುಬಂದು ತಕ್ಷಣ ಹಣದೊಂದಿಗೆ ವಾಹನವನ್ನು ತಂದು ವಿಚಾರಣೆ ಮಾಡಲಾಯಿತು.
ಚಾಲಕ ಮಾನವ್ ದೀಪ್ಸಿಂಗ್ ಬಳಿ ಯಾವುದೇ ದಾಖಲೆಗಳು ಇಲ್ಲವಾಗಿದ್ದು, ಸೂಕ್ತ ದಾಖಲೆ ತರುವಂತೆ ಸೂಚಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎ ರಾಜೀವ್ ಹಾಗೂ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಚೆಕ್ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುವಾಗ 20,22,300 ರೂ. ಮೌಲ್ಯದ 48 ಕೆಜಿ 156 ಗ್ರಾಂ ಬೆಳ್ಳಿ ಹಾಗೂ 1,23,000 ರೂ. ಮೌಲ್ಯದ 410 ಸೀರೆಗಳು, 87,800 ರೂ.ಮೌಲ್ಯದ 439 ಚೂಡಿದಾರ್‌ಗಳು, ಸುಮಾರು 39 ಸಾವಿರ ರೂ. ಮೌಲ್ಯದ ಪ್ಯಾಂಟ್ ಬಟ್ಟೆ, 9,800 ರೂ. ಮೌಲ್ಯದ 49 ಶರ್ಟ್ ಪೀಸ್‌ಗಳು ಪತ್ತೆಯಾಗಿದ್ದು, ಸೂಕ್ತ ದಾಖಲೆ ಇಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ನೆಲಮಂಗಲ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 20 ಲಕ್ಷ , ಬೆಳ್ಳಿ ವಸ್ತು, ಸೀರೆ ವಶ