ಬೆಂಗಳೂರು : ಪಿಎಫ್ಐ ಹಾಗೂ ಸಹವರ್ತಿ ಸಂಸ್ಥೆಗಳ ಮೇಲೆ ಪೊಲೀಸರು ಇತ್ತೀಚೆಗಷ್ಟೇ ದಾಳಿ ಮಾಡಿ ಅವುಗಳ ಕಚೇರಿಗಳಿಗೆ ಬೀಗ ಹಾಕಿದ್ದರು. ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)ದ ಬಗ್ಗೆ ಸ್ಫೋಟಕ ಮಾಹಿತಿ ಬಯಲಾಗಿದೆ.
ಯುವ ಸಮುದಾಯ ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸಿಎಫ್ಐ ಮುಖಂಡರು ಮನಪರಿವರ್ತನೆ ಮಾಡುತ್ತಿದ್ದರು ಎಂಬುದಕ್ಕೆ ಒಂದು ಚಿತ್ರ ಹಾಗೂ ಅದರಲ್ಲಿ ಬರೆದಿರುವ ಅಂಶಗಳೇ ಸಾಕ್ಷಿಯಾಗಿವೆ.
ಜಿನೋಸೈಡ್ ಎಂಬ ಪತ್ರ ಲಭ್ಯ : ಇಲ್ಲಿ ಲಭ್ಯವಾಗಿರುವ 'ಜಿನೋಸೈಡ್' ಎಂಬ ಪತ್ರದಲ್ಲಿ, ಭಾರತದಲ್ಲಿ ಮುಸಲ್ಮಾನರ ಮೇಲೆ ನರಮೇಧ ನಡೆಯುತ್ತಿದೆ. ಬಲಪಂಥೀಯ ಹಿಂದುತ್ವವು ಕೇಂದ್ರದಲ್ಲಿ ಅಧಿಕಾರವನ್ನು ಹಿಡಿದ ನಂತರ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ವಿರುದ್ಧದ ಹಿಂಸಾಚಾರವು ಹೆಚ್ಚಿದೆ. ಸಮುದಾಯಗಳ ನಡುವೆ ದ್ವೇಷವನ್ನು ಹರಡಲು ಅವರು ಸಮಾಜದಲ್ಲಿ ಅರ್ಥಹೀನ ಸುಳ್ಳುಗಳನ್ನು ಹರಡುತ್ತಾರೆ. ಈ ಸುಳ್ಳುಗಳನ್ನು ಜನ ನಿಜ ಎಂದು ಭಾವಿಸಿದ್ದಾರೆ.
ಕೇಂದ್ರದಿಂದ ಮುಸ್ಲಿಮರ ಮೇಲೆ ಹಿಂಸಾಚಾರ : ಕೋಮುಗಲಭೆ, ಹತ್ಯೆ ನಡೆದಾಗ ನಮ್ಮ ಸಮುದಾಯ ಮೇಲೆ ಗುರಿಯಾಗಿಸಿಕೊಂಡು ಫೈರಿಂಗ್ ನಡೆಯುತ್ತದೆ. ವಿದ್ಯಾವಂತ ಹಾಗೂ ಅಮಾಯಕರನ್ನು ಜೈಲಿಗೆ ಕಳುಹಿಸುತ್ತಾರೆ. ನಿಜವಾದ ಅರ್ಥದಲ್ಲಿ, ಇದು ವ್ಯವಸ್ಥಿತ ಮತ್ತು ಸಂಘಟಿತ ಕಾರ್ಯಕ್ರಮದ ಒಂದು ಭಾಗವಾಗಿದೆ. ಇದನ್ನು ನರಮೇಧ ಎಂದು ಕರೆಯಲಾಗುತ್ತದೆ. ಒಂದು ಗುಂಪಿನಿಂದ ಮತ್ತೊಂದು ಗುಂಪಿನಿಂದ ಯೋಜಿತ ಸಾಮೂಹಿಕ ಹತ್ಯೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪೂರ್ವ ವಿಭಾಗದ ಪೊಲೀಸರಿಂದ ಬಂಧಿತರಾಗಿದ್ದ 15 ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಪೊಲೀಸರ ಪರ ವಕೀಲರು ವಾದ ಮಂಡಿಸಿ ಬಂಧಿತರಾದ ಎಲ್ಲ ಆರೋಪಿಗಳು ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಯ ಧಕ್ಕೆಗೆ ಸಂಚು ರೂಪಿಸಿದ್ದರು.
ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ : ಆರೋಪಿಗಳ ಮೇಲೆ ಗುರುತರವಾದ ಅಪರಾಧದ ಆರೋಪಗಳಿದ್ದು, ಎಲ್ಲರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿಬೇಕು ಎಂಬ ಮನವಿಯನ್ನು ಕೋರ್ಟ್ ಪುರಸ್ಕರಿಸಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಬಳಿಕ ಎಲ್ಲ ಆರೋಪಿಗಳನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ :ಪಿಎಫ್ಐ ಬ್ಯಾನ್: ಅಜಿತ್ ದೋವಲ್ ನೀಡಿದ ಮಾಹಿತಿಯೇ ಇದಕ್ಕೆ ಕಾರಣವೇ?