ಬೆಂಗಳೂರು: ಒಂದೆಡೆ ಗಣೇಶ ಚತುರ್ಥಿ ಇನ್ನೊಂದೆಡೆ ಬಿಬಿಎಂಪಿ ಚುನಾವಣೆಯೂ ಸಮೀಪಿಸುತ್ತಿದ್ದು ಕೆಲ ರೌಡಿ ಶೀಟರ್ಗಳು ಬಾಲಬಿಚ್ಚಲು ಮುಂದಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪಶ್ಚಿಮ ವಿಭಾಗ ಪೊಲೀಸರು ಮುಂದಾಗಿದ್ದು ಇಂದು ಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಪಶ್ಚಿಮ ವಿಭಾಗದ ಮೂರು ಉಪವಿಭಾಗದಲ್ಲಿ ಸುಮಾರು 160 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಈ ಸಂದರ್ಭದಲ್ಲಿ 100 ರೌಡಿಗಳು ಪತ್ತೆಯಾಗಿದ್ದು 60 ಮಂದಿ ತಪ್ಪಿಸಿಕೊಂಡಿದ್ದಾರೆ. ಎರಡ್ಮೂರು ತಿಂಗಳಿನಿಂದ ನಿಗಾ ಇಟ್ಟಿರುವ ಪೊಲೀಸರು ಏಕಕಾಲದಲ್ಲಿ ಈ ದಾಳಿ ನಡೆಸಿದ್ದಾರೆ. ಈ ಪೈಕಿ ಸಕ್ರಿಯರಾಗಿದ್ದ 32 ರೌಡಿಗಳನ್ನು ಠಾಣೆಗೆ ಕರೆತಂದು ಬಾಂಡ್ ಓವರ್ ಮಾಡಿಸಿ ಪ್ರಿವೆನ್ಷನ್ ಆ್ಯಕ್ಟ್‌ನಡಿ ಕೇಸು ದಾಖಲಿಸಲಾಗಿದೆ.
ದಾಳಿಯ ವೇಳೆ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ರೌಡಿಗಳು ಸಿಕ್ಕಿಬಿದ್ದಿದ್ದಾರೆ. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೈಯದ್ ಅಜ್ಘರ್ ಮೇಲೆ 14 ಪ್ರಕರಣಗಳಿದ್ದು 10 ತಿಂಗಳಿನಿಂದ ತಲೆಮರೆಸಿಕೊಂಡಿದ್ದ. ಆರ್ ಆರ್ ನಗರದ ಕೇಶವ್ ಎಂಬಾತ ಮೇಲೆ ಐದು ಪ್ರಕರಣಗಳಿದ್ದು ಕೋರ್ಟ್ಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ. ಜಿಬ್ರಾನ್ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದು ಮನೆಯಲ್ಲಿ ಡ್ರ್ಯಾಗರ್ ಇಟ್ಟುಕೊಂಡಿದ್ದನು. ಈತನ ಮೇಲೆ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿರುವುದಾಗಿ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ ಪೊಲೀಸರ ಕಾರ್ಯಾಚರಣೆ: ಗಾಂಜಾ ಗ್ಯಾಂಗ್ ಅರೆಸ್ಟ್