ಬೆಂಗಳೂರು: ನಗರದಲ್ಲಿ ಪೊಲೀಸರ ಪಿಸ್ತೂಲ್ ಮತ್ತೆ ಸೌಂಡ್ ಮಾಡಿದೆ. ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ಇಂದು ನಸುಕಿನ ಜಾವ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಬ್ರಹ್ಮದೇವರ ಗುಡ್ಡದಲ್ಲಿ ನಡೆದಿದೆ.
ಪೊಲೀಸರು ಫೈರಿಂಗ್ ಮಾಡಿದ್ದರಿಂದ ಕಾಮಾಕ್ಷಿ ಪಾಳ್ಯ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಸೈಕೋ ಕಾಲಿಗೆ ಗುಂಡು ತಗುಲಿದೆ. ಕೆಲ ದಿನಗಳ ಹಿಂದೆ ಕಾಮಾಕ್ಷಿಪಾಳ್ಯದಲ್ಲಿ ಬನಶಂಕರಿ ನಿವಾಸಿಯಾಗಿದ್ದ ಮಂಜುನಾಥ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಆರೋಪಿ ವಿಶ್ವ ಎಸ್ಕೇಪ್ ಆಗಿದ್ದ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ನಿನ್ನೆ ರಾತ್ರಿ ಬ್ಯಾಡರಹಳ್ಳಿಯ ಬ್ರಹ್ಮದೇವರ ಗುಡ್ಡದ ಬಳಿ ಆರೋಪಿ ಇರುವುದನ್ನು ಖಚಿತಪಡಿಸಿಕೊಂಡು ಬಂಧಿಸಲು ತೆರಳಿದ್ದರು.
ಬಂಧನದ ವೇಳೆ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಮೇಲೆ ಡ್ರ್ಯಾಗರ್ನಿಂದ ಆರೋಪಿ ವಿಶ್ವನಾಥ್ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಪೊಲೀಸರು ಆತ್ಮರಕ್ಷಣೆಗಾಗಿ ವಿಶ್ವನಾಥ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಹೆಡ್ ಕಾನ್ಸ್ಟೇಬಲ್ ಮತ್ತು ಆರೋಪಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸಿಪಿ ವಿಜಯನಗರ ನಂಜುಂಡೇಗೌಡ ಮತ್ತು ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್ ಶ್ರೀ ಪ್ರಶಾಂತ್ ಅವರು ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಫೈ್ರಿಂಗ್ ಮಾಡಿದ್ದಾರೆ. ಆರೋಪಿ ವಿಶ್ವ ಅಲಿಯಾಸ್ ಸೈಕೋ ಮೇಲೆ 11ಕ್ಕೂ ಹೆಚ್ಚು ಪ್ರಕರಣಗಳಿವೆ.
ಕಾಮಕ್ಷಿಪಾಳ್ಯದಲ್ಲಿ ನವೆಂಬರ್ 8ರಂದು ಮಂಜುನಾಥ್ ಶವ ಸುಮನಹಳ್ಳಿ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ಕೊಲೆಮಾಡಿ ಶವ ಎಸೆದಿರುವ ಶಂಕೆ ವ್ಯಕ್ತಪಡಿಸಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.