ಬೆಂಗಳೂರು: ಟಿ-20 ವಿಶ್ವಕಪ್ ಮಹಾಸಮರದಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯಕ್ಕಾಗಿ ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಇನ್ನೊಂದೆಡೆ ನಗರದ ಪೊಲೀಸರು ಬೆಟ್ಟಿಂಗ್ ಬುಕ್ಕಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಹೈವೋಲ್ಟೇಜ್ ಪಂದ್ಯಕ್ಕೆ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹಳೆಯ ಬುಕ್ಕಿಗಳು ಹಾಗೂ ಬೆಟ್ಟಿಂಗ್ ಏಜೆಂಟ್ಗಳ ಮೇಲೆ ಖಾಕಿ ಪಡೆ ನಿಗಾ ವಹಿಸಿದೆ. ಇತ್ತೀಚೆಗೆ ನಡೆದ ಐಪಿಎಲ್-2021 ಟೂರ್ನಿ ವೇಳೆ ಸಿಸಿಬಿ ಪೊಲೀಸರು ನಗರದಲ್ಲಿ 20 ಪ್ರಕರಣ ದಾಖಲಿಸಿ, 27 ಬುಕ್ಕಿಗಳನ್ನು ಬಂಧಿಸಿದ್ದರು.
ಬೆಂಗಳೂರಿನ ಸಿಸಿಬಿ ವಿಶೇಷ ತಂಡ ಹಾಗೂ ಸೈಬರ್ ಕ್ರೈಂ ಪೊಲೀಸರು ಬೆಟ್ಟಿಂಗ್ ಮೇಲೆ ತೀವ್ರ ನಿಗಾವಹಿಸಿದ್ದು, ನಗರದ ಹೋಟೆಲ್, ಲಾಡ್ಜ್ಗಳಲ್ಲಿ ಹೊಸದಾಗಿ ಬುಕ್ ಮಾಡಿರುವ ಗ್ರಾಹಕರ ಬಗ್ಗೆ ಗಮನಹರಿಸಲಾಗಿದೆ. ಆನ್ಲೈನ್ ಮೂಲಕ ಬೆಟ್ಟಿಂಗ್ ದಂಧೆ ನಡೆಸುವವರ ಮೇಲೆ ಸೈಬರ್ ಕ್ರೈಂ ಪೊಲೀಸರು ಎಚ್ಚರ ವಹಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ಆನ್ಲೈನ್ ಸೇರಿದಂತೆ ಯಾವುದೇ ಆ್ಯಪ್ಗಳ ಮೂಲಕ ಜೂಜು, ಬೆಟ್ಟಿಂಗ್ ನಿಷೇಧಿಸಿ ಆದೇಶ ಹೊರಡಿಸಿದೆ. ಬಳಿಕ ಡ್ರೀಮ್ ಇಲೆವೆನ್ ಸೇರಿ ವಿವಿಧ ಆ್ಯಪ್ಗಳ ಮೂಲಕ ಜೂಜಿನಲ್ಲಿ ಭಾಗಿಯಾದ ಆರೋಪಿಗಳ ವಿರುದ್ದ ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: T20 World Cup: ದುಬೈನಲ್ಲಿಂದು ಭಾರತ-ಪಾಕ್ ರೋಚಕ ಕದನ; 6-0 ಗೆಲುವಿನತ್ತ ಟೀಂ ಕೊಹ್ಲಿ ಚಿತ್ತ