ಬೆಂಗಳೂರು : ಅವಧಿ ಮೀರಿ ಪಬ್ನಲ್ಲಿ ಪಾರ್ಟಿ ಮಾಡಿದ ಆರೋಪದ ಹಿನ್ನೆಲೆ ನಟ ದರ್ಶನ್ ಸೇರಿ ಎಂಟು ಮಂದಿಗೆ ನೀಡಲಾಗಿದ್ದ ನೊಟೀಸ್ಗೆ ಉತ್ತರಿಸಲು ಸುಬ್ರಮಣ್ಯನಗರ ಠಾಣೆ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ನಟರಾದ ದರ್ಶನ್, ಡಾಲಿ ಧನಂಜಯ್, ನೀನಾಸಂ ಸತೀಶ್, ಚಿಕ್ಕಣ್ಣ, ಕಾಟೇರ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ಅವರು ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು. ಜನವರಿ 3 ರಂದು ಜೆಟ್ಲಾಗ್ನಲ್ಲಿ ಏರ್ಪಡಿಸಲಾಗಿದ್ದ ಪಾರ್ಟಿ ಆರೋಪ ಸಂಬಂಧ ಪೊಲೀಸರು ವಿಚಾರಣೆ ನಡೆಸಿ, ಅವರಿಂದ ಹೇಳಿಕೆ ಪಡೆದುಕೊಂಡರು.
ವಿಚಾರಣೆ ಎದುರಿಸಿದ ಬಳಿಕ ಪ್ರಕರಣ ಪರವಾಗಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ಕಾಟೇರ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಜನವರಿ 3ರಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಊಟ ಮಾಡಿಕೊಂಡು ಸ್ಥಳದಿಂದ ನಿರ್ಗಮಿಸಿದ್ದೇವೆ. ಊಟ ಮಾಡುವುದು ಪೂರ್ವ ನಿರ್ಧರಿತವಾಗಿರಲಿಲ್ಲ. ಊಟ ಮಾಡೋದು ತಡವಾಯಿತು. ಈ ವೇಳೆ ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ದರ್ಶನ್ ಟಾರ್ಗೆಟ್ ಯಾಕೆ ?: ಕಾಟೇರ ಸಿನಿಮಾ ಯಶಸ್ಸು ತಡೆಯಲಾರದೇ ದರ್ಶನ್ ಅವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ವಿನಾಕಾರಣ ಅವರ ಹೆಸರು ತಳುಕು ಹಾಕುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ ರಾಕ್ ಲೈನ್, ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ನ್ಯಾಯಕ್ಕೆ ತಲೆಬಾಗಲೇಬೇಕು. ಅದರಂತೆ ಪೊಲೀಸ್ ವಿಚಾರಣೆ ಎದುರಿಸಿದ್ದೇವೆ. ಕನ್ನಡದ ಎಲ್ಲ ಚಿತ್ರಗಳು ಹಿಟ್ ಆಗಬೇಕು ಎಂದು ಆಶಿಸಿದರು.
ಎಲ್ಲರಂತೆ ನಾವೂ ಸಹ ಸಾಮಾನ್ಯ ಜನರು. ತಡರಾತ್ರಿವರೆಗೂ ಊಟ ಮಾಡಿರುವ ಬಗ್ಗೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಗ್ರಾಹಕರಿಗೆ ಇದೇ ಮೊದಲ ಬಾರಿಗೆ ನೊಟೀಸ್ ಜಾರಿ ಮಾಡಲಾಗಿದೆ. ತಡರಾತ್ರಿ ಊಟ ಮಾಡಿದ ಎಷ್ಟು ಮಂದಿಗೆ ನೊಟೀಸ್ ಜಾರಿ ಮಾಡಿದ್ದೀರಾ?. ಎಷ್ಟು ಮಂದಿ ವಿಚಾರಣೆ ಎದುರಿಸಿದ್ದಾರೆ ? ಇದೇ ರೀತಿ ಮುಂದುವರೆದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಕಾಟೇರ ತಂಡದ ಪರ ನಾರಾಯಣಸ್ವಾಮಿ ಮಾತನಾಡಿ, ವೈಯಕ್ತಿಕವಾಗಿ ಯಾರು ಎಲ್ಲಿ ಬೇಕಾದರೂ ಊಟಕ್ಕೆ ಹೋಗಬಹುದು. ಅದೇ ರೀತಿ ಜೆಟ್ ಲಾಗ್ ಪಬ್ನಲ್ಲಿ ಊಟ ಮಾಡಿದ್ದಾರೆ. ಆದರೆ, ದೊಡ್ಡದಾಗಿ ಬಿಂಬಿಸಿ ದರ್ಶನ್ ಅವರನ್ನ ಟಾರ್ಗೆಟ್ ಮಾಡಲಾಗಿದೆ. ಸಿಆರ್ಪಿಸಿ 164 ಪ್ರಕಾರ ಪೊಲೀಸರು ಹೇಳಿಕೆ ಪಡೆದಿದ್ದಾರೆ. ದರ್ಶನ್ನ ಟಾರ್ಗೆಟ್ ಮಾಡಿ ಈ ರೀತಿ ಮಾಡಿದ್ದಾರೆ. ಸಾಕಷ್ಟು ಜನ ತಡರಾತ್ರಿವರೆಗೂ ಊಟ ಮಾಡ್ತಾರೆ. ಎಲ್ಲರಿಗೂ ಕೂಡ ನೊಟೀಸ್ ಕೊಟ್ಟು ಕಳಿಸ್ತಾರಾ..? ದರ್ಶನ್ ಇರೋದ್ರಿಂದ ಮಾತ್ರ ನೊಟೀಸ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 40 ರೂ.ಗೆ 'ಕಾಟೇರ' ಲಿಂಕ್ ಶೇರ್: ಪೈರಸಿ ಆರೋಪಿ ಅರೆಸ್ಟ್