ಬೆಂಗಳೂರು: ರಾಜಧಾನಿಯಲ್ಲಿಂದು ಮತ್ತೆ ನಸುಕಿನ ಜಾವ ಗುಂಡಿನ ಸದ್ದು ಕೇಳಿಬಂದಿದ್ದು, ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಮಾಯಣ್ಣ ಬಿರಾನಿ ಫೈರಿಂಗ್ ನಡೆಸಿದ್ದು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಿಪ್ಪೇನಹಳ್ಳಿ ಬಳಿ ಘಟನೆ ನಡೆದಿದೆ.
ಪ್ರವೀಣ್ (22) ಬಂಧಿತ ಆರೋಪಿ. ಡಕಾಯಿತಿ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ಆರೋಪಿ ಪ್ರವೀಣ್ನನ್ನು ಬಂಧಿಸಲು ಮುಂಜಾನೆ ತಿಪ್ಪೇನಹಳ್ಳಿ ಬಳಿ ತೆರಳಿದಾಗ ಹೆಡ್ ಕಾನ್ಸ್ಟೇಬಲ್ ರಂಗಸ್ವಾಮಿ ಮೇಲೆ ಲಾಂಗ್ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಸಬ್ಇನ್ಸ್ ಪೆಕ್ಟರ್ ಆತನನ್ನು ಬಂಧಿಸಿದ್ದಾರೆ.
ಗಾಯಾಳು ಹೆಡ್ ಕಾನ್ಸ್ಟೇಬಲ್ ಹಾಗೂ ಆರೋಪಿ ಪ್ರವೀಣ್ನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿರುದ್ಧ ರಾಜಗೋಪಾಲನಗರ, ಪೀಣ್ಯ ಠಾಣೆಗಳಲ್ಲಿ ಹಲ್ಲೆ, ಡಕಾಯಿತಿ ಪ್ರಕರಣಗಳು ದಾಖಲಾಗಿವೆ.
ಇದನ್ನು ಓದಿ: ಸುಪ್ರೀಂಕೋರ್ಟ್‌ನಲ್ಲಿ ಇಂದು ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆ
ಏನಿದು ಪ್ರಕರಣ: ಜನವರಿ 16ರಂದು ಖಚಿತ ಮಾಹಿತಿ ಮೇರೆಗೆ ಪೀಣ್ಯ ಪೊಲೀಸರು ತಿಪ್ಪೇನಹಳ್ಳಿ ನೀಲಗಿರಿ ಅರಣ್ಯ ಪ್ರದೇಶದಲ್ಲಿ ದಾಳಿ ಮಾಡಿದ್ದರು. ರೌಡಿ ಅಭಿಷೇಕ್ ಅಲಿಯಾಸ್ ಅಭಿ ಎಂಬಾತನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ದಾಳಿಯ ವೇಳೆ 2 ಲಾಂಗ್, ಅಂದಾಜು 2 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. 6 ಜನ ಆರೋಪಿಗಳು ಆಗ ತಪ್ಪಿಸಿಕೊಂಡಿದ್ದು, ಅದರಲ್ಲಿ ಇಬ್ಬರನ್ನು ಬೆಳಗ್ಗೆ ಬಂಧಿಸಲಾಗಿದೆ. ಪರಾರಿಯಾಗಿದ್ದ ಆರೋಪಿ ರಾಘವೇಂದ್ರ ನಗರದ ಆಂಧ್ರಹಳ್ಳಿಯ ನಿವಾಸಿ ಪ್ರವೀಣ್ ಎಂಬಾತನನ್ನು ಪೊಲೀಸ್ ಕಾನ್ಸ್ಟೇಬಲ್ ಹೆಚ್.ಸಿ ರಂಗಸ್ವಾಮಿ ಬಂಧಿಸಲು ಪ್ರಯತ್ನಿಸುತ್ತಿರುವಾಗ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಸಮಯದಲ್ಲಿ ಸಬ್ ಇನ್ಸ್ಪೆಕ್ಟರ್ ಮಾಯಣ್ಣ ಬಿರಾನಿ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆರೋಪಿ ಪ್ರವೀಣ್ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಹೆಸರಗಟ್ಟ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಪ್ರವೀಣ್ ಆರ್.ಎಸ್ ಲೇಔಟ್ ನಿವಾಸಿ ರೌಡಿ ಶೀಟರ್ ಅನಿಲ್ ಅಲಿಯಾಸ್ ಅನಿಲ್ ಕುಮಾರ್ ಸಹವರ್ತಿ ಎಂದು ತಿಳಿದುಬಂದಿದೆ. ಈತನ ವಿರುದ್ಧ ನಗರದ ಠಾಣೆಗಳಲ್ಲಿ 3 ಪ್ರಕರಣಗಳು ಈಗಾಗಲೇ ದಾಖಲಾಗಿವೆ.