ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ರೌಡಿ ಶೀಟರ್ ಮುನಿರಾಜು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಮುನಿರಾಜು ಅಲಿಯಾಸ್ ಮುನ್ನಾ ಎಂಬಾತನೇ ಪೊಲೀಸರಿಂದ ಗುಂಡೇಟು ತಿಂದಿರುವ ರೌಡಿಶೀಟರ್. ಕ್ರಿಕೆಟ್ ಆಡುವ ವಿಚಾರಕ್ಕೆ ಮುನಿರಾಜು ಮತ್ತು ಅವರ ಗ್ಯಾಂಗ್ನವರು ಸಂದೀಪ್ ಮತ್ತು ಸುದೀಪ್ ಎಂಬುವರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ನಂದಿನಿ ಲೇ ಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಮುನಿರಾಜುನನ್ನು ಬಂಧಿಸಲು ಮುಂದಾದಾಗ ಬಲರಾಮ್ ಎಂಬ ಪಿಸಿ ಮೇಲೆ ಮುನಿರಾಜು ಹಲ್ಲೆ ನಡೆಸಿದ್ದ. ಈ ವೇಳೆ, ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ಶರಣಾಗುವಂತೆ ಸೂಚನೆ ನೀಡಿದ್ದರು. ಆದರೆ, ಪುನಃ ಪ್ರತಿ ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಮುನ್ನಾ ಸೇರಿದಂತೆ ಪಿಸಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಆರೋಪಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದು, ಈತ ರಾಜಾಗೋಪಾಲನಗರ ರೌಡಿಶೀಟರ್ ಆಗಿದ್ದಾನೆ. ಈತನ ವಿರುದ್ಧ ನಂದಿನಿ ಲೇಔಟ್, ಮಹಾಲಕ್ಷೀ ಲೇಔಟ್, ಸುಬ್ರಮಣ್ಯಪುರ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ಇನ್ನು ಈತನ ಜೊತೆ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.