ಬೆಂಗಳೂರು : ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್ಗಳ ಮೇಲೆ ಜಾಲಹಳ್ಳಿ ಪೊಲೀಸರು ಗುಂಡಿನ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಂದಿನಿ ಲೇಔಟ್ನ ಕೂಲಿ ನಗರದಲ್ಲಿ ರೌಡಿಶೀಟರ್ಗಳಾದ ವಿಜಯ್ ಹಾಗೂ ಹನುಮಂತ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಪಡೆದ ಜಾಲಹಳ್ಳಿ ಪೊಲೀಸರು, ಸ್ಥಳಕ್ಕೆ ತೆರಳಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ನಡೆಸಿದ ಪ್ರತಿ ದಾಳಿಗೆ ಶ್ರೀನಿವಾಸಮೂರ್ತಿ ಹಾಗೂ ನರೇಶ್ ಕಾನ್ಸ್ಟೆಬಲ್ಗಳು ಗಾಯಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಗಾಯಗೊಂಡ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ದಡಿಯಾ ವಿಜಯ್ ಮೇಲೆ ದರೋಡೆ, ಸರಗಳ್ಳತನ ಸೇರಿದಂತೆ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಇನ್ನು ಹನುಮಂತ ಎಂಬುವನು ಇದೇ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದನು.
ಕಳೆದ ವಾರ ಇದೇ ಆರೋಪಿಗಳು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ಸ್ಪೆಕ್ಟರ್ ಯಶವಂತ್ ಹಾಗೂ ಪಿಎಸ್ಐ ಲೇಪಾಕ್ಷಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.