ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿರುವ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಸತತ ಐದು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖಾಧಿಕಾರಿಗಳಿಗೆ ನಾನು ಸಂಪೂರ್ಣ ಮಾಹಿತಿ ಕೊಟ್ಟಿದ್ದೇನೆ. ತನಿಖೆಯ ದೃಷ್ಟಿಯಿಂದ ನಾನು ಏನೂ ಹೇಳಲು ಆಗಲ್ಲ. ನನಗೆ ಸಂಬಂಧಿಕರೊಬ್ಬರು ಕೊಟ್ಟ ಸಿಡಿ ಮಾತ್ರ ಕೊಟ್ಟಿದ್ದೇನೆ. ಯುವತಿ ಬಗ್ಗೆ ನನಗೆ ಗೊತ್ತಿರೋದನ್ನು ಹೇಳಿದ್ದೇನೆ. ಕೆಲವೊಂದು ವಿಚಾರಗಳನ್ನೀಗ ನಾನು ಮಾಧ್ಯಮದ ಮುಂದೆ ಹೇಳುವುದಕ್ಕೆ ಆಗುವುದಿಲ್ಲ ಎಂದರು.
ಇದನ್ನೂ ಓದಿ: ಅಣ್ಣನನ್ನು ರಾಜಕೀಯವಾಗಿ ಮುಗಿಸಲು ನಕಲಿ ಸಿಡಿ ಬಳಕೆ: ಲಖನ್ ಜಾರಕಿಹೊಳಿ
ಇದೇ ವೇಳೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೂ ಪ್ರತಿಕ್ರಿಯೆ ನೀಡಿದರು. 'ಸಿಡಿ'ಗಾಗಿ ಐದು ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಕಲ್ಲಹಳ್ಳಿ, ಕುಮಾರಸ್ವಾಮಿ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಯಾರು ಬ್ಲ್ಯಾಕ್ ಮೇಲ್ ಮಾಡ್ತಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಷ್ಟೇ ಹೇಳಿ ನಿರ್ಗಮಿಸಿದರು.