ಬೆಂಗಳೂರು: ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಪೊಲೀಸರಲ್ಲಿ, ಮಾನಸಿಕ ಸ್ಥೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ನಿಮಾನ್ಸ್ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ನಗರದ ಎಲ್ಲ ಪೊಲೀಸರಿಗೂ ಏಕಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಗ್ಯ ಶಿಬಿರ ನಡೆಸಿದರು.
ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಬಿರ ಏರ್ಪಡಿಸಿದ್ದ ಬೆಂಗಳೂರು ನಗರ ಪೊಲೀಸರ ನಡೆಗೆ, ಸಾರ್ವಜನಿಕ ವಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯಾಕಂದ್ರೇ ಸಾರ್ವಜನಿಕರ ಹಿತದೃಷ್ಟಿಯಿಂದ ಜೂಮ್ ಆ್ಯಪ್ ಬಳಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಇದಕ್ಕೆ ರಾಜ್ಯ ಸರ್ಕಾರವು ಅನುಮೋದಿಸಿದ್ದರೂ, ನಗರ ಪೊಲೀಸರು ಮಾತ್ರ ಜೂಮ್ ಬಳಕೆ ಮಾಡುವುದನ್ನು ಎಂದಿನಂತೆ ಮುಂದುವರಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ನಗರ ಪೊಲೀಸ್ ಇಲಾಖೆಯಿಂದ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ, ಒಂದು ಗಂಟೆಗಳ ಕಾಲ ವೈದ್ಯರು, ಮನೋ ಚಿಕಿತ್ಸರು ಕೊವೀಡ್ -19 ವಿರುದ್ಧ ಹೋರಾಡುವುದು ಹೇಗೆ..? ನಮ್ಮ ಮಾನಸಿಕ ಸ್ಥಿತಿ ಹೇಗಿರಬೇಕು ಹಾಗೂ ಸೋಂಕಿನಿಂದ ದೂರ ಉಳಿಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮಗಳ ಬಗ್ಗೆ ಪೊಲೀಸ್ ಹಾಗೂ ಸಿಬ್ಬಂದಿಗೆ ಅರಿವು ಮೂಡಿಸಿದರು. ಶಿಬಿರದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.