ಬೆಂಗಳೂರು: ವಾರ್ಡ್ ನಂ.7ರ ಕೆಂಪಾಪುರದಲ್ಲಿ ಒಂದು ಭಾಗಕ್ಕೆ ವಾಲಿರುವ ಪಿಜಿ ಕಟ್ಟಡ ತೆರವುಗೊಳಿಸಲು ಬಿಬಿಎಂಪಿ ಸಕಲ ಸಿದ್ಧತೆ ನಡೆಸಿದೆ. ಕಟ್ಟಡದ ಸುತ್ತಮುತ್ತಲಿದ್ದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸಿದ್ದು, ಕಟ್ಟಡ ತೆರವುಗೊಳಿಸಲು ಸಜ್ಜಾಗಿದೆ.
ಯಲಹಂಕ ವಲಯ ಬಿಬಿಎಂಪಿ ಜಂಟಿ ಆಯುಕ್ತ ಡಾ.ಅಶೋಕ್ ಮಾತನಾಡಿ, ಕಟ್ಟಡದ ತೆರವುಗೊಳಿಸುವ ವೇಳೆ ಸುತ್ತಮುತ್ತ ವಾಸಿಸುತ್ತಿರುವ ಯಾವುದೇ ನಾಗರಿಕರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಳ್ಳಲಾಗಿದೆ. ಈ ಭಾಗದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ. ಗ್ಯಾಸ್ ಸಿಲಿಂಡರ್ಗಳನ್ನು ಸಹ ಬೇರೆಡೆಗೆ ಸಾಗಿಸಲಾಗಿದೆ. ಜನರು ಅಕ್ಕ ಪಕ್ಕದ ಸಂಬಂಧಿಕರ ಮನೆಗಳು ಸೇರಿದಂತೆ ಇನ್ನಿತರೆಡೆ ಉಳಿದುಕೊಂಡಿದ್ದಾರೆ. ಇನ್ನುಳಿದಂತೆ ಶಾಲೆಗಳಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಇಂದು ರಾತ್ರಿ ಕಟ್ಟಡ ತೆರವುಗೊಳಿಸಲು ಸಿದ್ಧತೆ ನಡೆದಿದ್ದು, ಬಿಬಿಎಂಪಿ ಅಧಿಕಾರಿಗಳು, ಅಗ್ನಿಶಾಮಕದಳದ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿ ಪೊಲೀಸರು ಸೇರಿದಂದೆ ತಜ್ಞರ ತಂಡ ಸಜ್ಜಾಗಿದೆ ಎಂದು ಮಾಹಿತಿ ನೀಡಿದರು.
ಘಟನಾ ಸ್ಥಳ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಯಾರಿಗೂ ತೊಂದರೆಯಾಗದಂತೆ ಸುತ್ತಮುತ್ತಲಿನ 36 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಆ್ಯಂಬುಲೆನ್ಸ್, ಸಿಸಿಟಿವಿ ಸೇರಿದಂತೆ ಇನ್ನಿತರ ಸೂಕ್ತ ಭದ್ರತೆ ಒದಗಿಲಾಗಿದೆ ಎಂದು ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ರು.
ನಿಯಮ ಮೀರಿ ಕಟ್ಟಡ ನಿರ್ಮಿಸಿರುವುದಾಗಿ ಕಂಡು ಬಂದಿದೆ. ಈ ಘಟನೆಗೆ ಕಾರಣರಾದ ಮಾಲೀಕರು ಹಾಗೂ ಗುತ್ತಿಗೆದಾರರನ್ನು ಬಿಬಿಎಂಪಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ತಪ್ಪಿತಸ್ಥರ ಮೇಲೆ ಕೇಸ್ ದಾಖಲಿಸಲಾಗುತ್ತದೆ ಎಂದರು.