ಬೆಂಗಳೂರು : ಕೊರೊನಾ ಸೋಂಕಿನ ಸರಪಳಿ ಮುರಿಯಲು ವಿಧಿಸಲಾಗಿರುವ ವೀಕೆಂಡ್ ಕರ್ಫ್ಯೂ ವೇಳೆ ವೈದ್ಯಕೀಯ ಹಾಗೂ ಅಗತ್ಯ ಸೇವೆ ಹೊರತುಪಡಿಸಿ ಅನಗತ್ಯ ಜನ ಓಡಾಡುವುದು ಕಂಡು ಬಂದರೆ ಅಂತಹವರನ್ನು ಬಂಧಿಸಲಾಗುತ್ತೆ ಅಂತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಆದೇಶದಂತೆ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ. ನಾಳೆ ಬೆಳಗ್ಗೆ 6 ರಿಂದ 10 ಗಂಟೆವರೆಗೂ ಅಂದರೆ ನಾಲ್ಕು ತಾಸು ಮಾತ್ರ ಅಗತ್ಯ ಸೇವೆಗಳು ಲಭ್ಯವಿರಲಿವೆ.
10 ಗಂಟೆ ಮುಗಿದ ಬಳಿಕ ಮೆಡಿಕಲ್ ಶಾಪ್ ಹೊರತುಪಡಿಸಿದರೆ ಯಾವುದೇ ಸೇವೆಗಳು ಇರುವುದಿಲ್ಲ. ಕರ್ಫ್ಯೂ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವ ಸಾಹಸಕ್ಕೆ ಕೈ ಹಾಕಬೇಡಿ.
ಅನಗತ್ಯವಾಗಿ ರಸ್ತೆಯಲ್ಲಿ ತಿರುಗುತ್ತಿರುವುದು ಕಂಡು ಬಂದರೆ ಅಂತವಹರನ್ನು ಬಂಧಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಹೋಗುವುದಿದ್ದರೆ ಇಂದೇ ಹೋಗಿ ಊರು ಸೇರಿಕೊಳ್ಳಿ.
ಮದುವೆ ಸಮಾರಂಭಕ್ಕೆ ಕೇವಲ 50 ಮಂದಿಗೆ ಮಾತ್ರ ಅವಕಾಶವಿದೆ. ಹಾಗಂತಾ, ಕಾರ್ಡ್ ಇಟ್ಟುಕೊಂಡು ತಿರುಗಾಡುವುದು ಸರಿಯಲ್ಲ. ಮದುವೆಯಲ್ಲಿ ಭಾಗಿಯಾಗುವವರು ಒಂದು ದಿನ ಮುಂಚಿತವಾಗಿ ನಗರಕ್ಕೆ ಬನ್ನಿ.
ವಿವಾಹ ಬಳಿಕ ಒಂದೇ ಕಡೆ ವಾಸ್ತವ್ಯ ಹೂಡಿ ಸೋಮವಾರ ಬೆಳಗ್ಗೆ ಊರಿಗೆ ಹೋಗುವಂತೆ ಸಲಹೆ ನೀಡಿದ್ದಾರೆ. ಕರ್ಫ್ಯೂ ವೇಳೆ ಯಾರಿಗಾದರೂ ಅನಾರೋಗ್ಯ ಕಾಡಿದರೆ ಚಿಂತೆಪಡಬೇಕಾದ ಅಗತ್ಯವಿಲ್ಲ. ಮೆಡಿಕಲ್ ಎಮರ್ಜೆನ್ಸಿ ಇದ್ದರೆ ಡಯಲ್ 100 ಅಥವಾ 112 ಕರೆ ಮಾಡಿ, ಪೊಲೀಸರೇ ನಿಮ್ಮ ಸಹಾಯಕ್ಕೆ ಧಾವಿಸಲಿದ್ದಾರೆ.
ಕಳೆದ ವರ್ಷ ಲಾಕ್ಡೌನ್ ವೇಳೆ ಡೆಲಿವರಿ ಬಾಯ್ ಹೆಸರಿನಲ್ಲಿ ಸುಳ್ಳು ಪಾಸ್ ಪಡೆದು ತಿರುಗಾಡಿದ್ದರು. ಅದೇ ತರಹ ಡೆಲಿವರಿ ಬಾಯ್ ಸೋಗಿನಲ್ಲಿ ಓಡಾಡುವುದು ಕಂಡು ಬಂದರೆ ಅವರ ವಾಹನ ಜಪ್ತಿ ಮಾಡಿಕೊಳ್ಳಲಾಗುವುದು ಎಂದರು.