ಬೆಂಗಳೂರು : ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಯುಕ್ತರು ಆರ್ಟಿಸಿಪಿಆರ್ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ದೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ತನ್ನ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ : ರಾಜಧಾನಿ ಪೊಲೀಸ್ ಸಿಬ್ಬಂದಿಯಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 738 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೋಂಕು ತಗುಲಿದೆ. ಇದರ ಬೆನ್ನಲ್ಲೇ ಸಿಬ್ಬಂದಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಪೊಲೀಸ್ ಕಮಿಷನರ್ ಕಮಲ್ ಪಂತ್ ಸೂಚನೆ ನೀಡಿದ್ದಾರೆ.
ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಠಾಣೆ ಬಿಟ್ಟು ಹೊರಗೆ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಟೆಸ್ಟ್ ಹೆಚ್ಚಳ ಮಾಡುವಂತೆ ಅವರು ಸಲಹೆ ನೀಡಿದ್ದಾರೆ. ಆಯಾ ಠಾಣೆಗಳಲ್ಲಿ ಗರ್ಭಿಣಿ ಮಹಿಳಾ ಸಿಬ್ಬಂದಿಗೆ ಆರೋಗ್ಯದ ಸಮಸ್ಯೆ ಕಾಣಿಸಿದರೆ ಕೆಲಸಕ್ಕೆ ಬರದೆ ಮನೆಯಲ್ಲಿರುವಂತೆ ಸೂಚಿಸಲಾಗಿದೆ.
ಅಲ್ಲದೇ ಹಿರಿಯ ಎಎಸ್ಐ ಸಿಬ್ಬಂದಿ ಸಹ ಸ್ಟೇಷನ್ನಲ್ಲಿಯೇ ಕಾರ್ಯನಿರ್ವಹಿಸಲು ಸಲಹೆ ನೀಡಲಾಗಿದೆ. ಹೊಯ್ಸಳ ರೌಂಡ್ಸ್ ಮತ್ತು ಚೀತಾ ಗಸ್ತು ಎಲ್ಲಾ ಹಿರಿಯ ಸಿಬ್ಬಂದಿ ಹೊರತು ಪಡಿಸಿ ಯುವ ಸಿಬ್ಬಂದಿ ತೆರಳಲು ಸೂಚನೆ ನೀಡಲಾಗಿದೆ.
ಠಾಣೆಗಳಲ್ಲಿ ಹಾಗೂ ವಾಹನಗಳಿಗೆ ಪ್ರತಿ ನಿತ್ಯ ಎರಡು ಬಾರಿ ಸ್ಯಾನಿಟೈಸ್ ಮತ್ತು ಸಿಬ್ಬಂದಿಗೆ ಫೇಸ್ ಶೀಲ್ಡ್ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಟೆಸ್ಟ್ ಮಾಡಿಸಿ, ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗಿದೆ.
ಸೋಂಕಿತ ಸಿಬ್ಬಂದಿಯ ಆರೋಗ್ಯ ಮತ್ತು ಅವರ ಕುಟುಂಬದ ಯೋಗ ಕ್ಷೇಮ ವಿಚಾರಿಸಲು ಇನ್ಸ್ಪೆಕ್ಟರ್ ಮತ್ತು ಡಿಸಿಪಿಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ. ತನಿಖೆ ಸಲುವಾಗಿ ಸಿಬ್ಬಂದಿ ಹೊರ ರಾಜ್ಯಕ್ಕೆ ಹೋಗುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆರೋಗ್ಯದ ಎಚ್ಚರಿಕೆ ಜತೆಗೆ ಕಾರ್ಯ ನಿರ್ವಹಣೆ ಮಾಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಹೋಂ ಐಸೊಲೇಷನ್ ಮುಕ್ತಾಯ : ವೈದ್ಯಕೀಯ ಪರೀಕ್ಷೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ ಸಿಎಂ ಬೊಮ್ಮಾಯಿ