ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ನಗರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಡಿಸೆಂಬರ್ 31 ರಂದೇ ಬೆಂಗಳೂರಿನಾದ್ಯಂತ 7 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಈ ಬಾರಿ ಎರಡು ಶಿಫ್ಟ್ನಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಡಿ.31 ಬೆಳಗ್ಗೆಯಿಂದ ಮಾರನೇ ದಿನ 2 ಗಂಟೆವರೆಗೆ ಪೊಲೀಸರು ಗಸ್ತು ಕಾಯಲಿದ್ದಾರೆ. ಪ್ರಮುಖವಾಗಿ ಎಂ.ಜಿ.ರೋಡ್ ಹಾಗೂ ಬ್ರಿಗೇಡ್ ರೋಡ್ನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುವುದು ಎಂದರು.
ನಗರದೆಲ್ಲೆಡೆ 270 ಹೊಯ್ಸಳ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾವುದೇ ಸಮಸ್ಯೆಗಳ ಬಗ್ಗೆ ಕರೆ ಬಂದರೂ ಏಳು ನಿಮಿಷಗಳಲ್ಲಿ ಸ್ಥಳಕ್ಕೆ ತೆರಳುತ್ತೇವೆ. ಬ್ರಿಗೇಡ್ ರೋಡ್, ಎಂಜಿ.ರೋಡ್, ಕೋರಮಂಗಲದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, 1500 ಕ್ಕೂ ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕುಡಿದು ಗಲಾಟೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕುಡಿದು ಹೆಣ್ಣು ಮಕ್ಕಳ ಮೇಲೆ ಬೀಳುವ ಪ್ರಕರಣಗಳನ್ನು ಸಹಿಸುವುದಿಲ್ಲ. ಅಂತಹವರನ್ನು ಕೂಡಲೇ ವಶಕ್ಕೆ ಪಡೆಯುತ್ತೇವೆ. ಓಲಾ, ಉಬರ್ ಸೇರಿದಂತೆ ವಿವಿಧ ಕಂಪೆನಿಗಳ ಕ್ಯಾಬ್ ಚಾಲಕರಿಗೆ ಸಹ ಎಚ್ಚರಿಕೆ ನೀಡಿದ ಆಯುಕ್ತರು ಒಬ್ಬರೇ ಮಹಿಳೆಯರು ಪ್ರಯಾಣಿಸುತ್ತಿರುವ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಕಾನೂನು ಉಲ್ಲಂಘಿಸಿರುವುದು ಕಂಡು ಬಂದರೆ ಕಂಪೆನಿಗಳು ಚಾಲಕರ ವಿರುದ್ದ ಸಹ ಕ್ರಮ ಕೈಗೊಳ್ಳಬೇಕು ಎಂದರು.
ಇನ್ನು ಪ್ರತಿಷ್ಠಿತ ನಗರ ಹೋಟೆಲ್ಗಳಲ್ಲಿ ಶಾನ್ವದಳ ಮುಖಾಂತರ ತಪಾಸಣೆ ಮಾಡಲಾಗುವುದು. ಪಾರ್ಟಿ, ಹೋಟೆಲ್‌ಗಳಿಗೆ ಹೋಗುವ ಮಹಿಳೆಯರಿಗೆ ಕಿವಿಮಾತು ಹೇಳಿದ ಭಾಸ್ಕರ್ ರಾವ್, ಯಾರೇ ಅಪರಿಚಿತ ವ್ಯಕ್ತಿ ಏನೇ ಕೊಟ್ರೂ ತೆಗೆದುಕೊಳ್ಳಬಾರದು. ಹೋಟೆಲ್ಗಳಲ್ಲಿ ಜ್ಯೂಸ್, ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಅಂಶವನ್ನ ಬೆರೆಸಲಾಗುತ್ತದೆ. ಡ್ರಗ್ಸ್ ಹಾಗೂ ಮಾದಕ ವಸ್ತುಗಳು ಸರಬರಾಜು ಆಗುವ ಹಿನ್ನಲೆ ಈ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊಸ ವರ್ಷದಂದು ನೈಟ್ ಲೈಫ್ ಅವಧಿ ವಿಸ್ತರಣೆಯಾಗಿದೆ. ಬಾರ್, ರೆಸ್ಟೊರೆಂಟ್, ಪಬ್, ಹೋಟೆಲ್‌ಗಳಿಗೆ ರಾತ್ರಿ ಒಂದು ಗಂಟೆಯಿಂದ ಎರಡು ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ.