ಬೆಂಗಳೂರು: ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಪಾದಚಾರಿ ಮಾರ್ಗದಲ್ಲಿದ್ದ ಪೊಲೀಸ್ ಚೌಕಿ ನೆಲಕ್ಕುರುಳಿದ ಘಟನೆ ತಡರಾತ್ರಿ ನಗರದ ಸಿಐಡಿ ಕಚೇರಿ ಮುಂಭಾಗ ನಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಬಳಿಕ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಗೆ ಗುಂಡೇಟು: ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆರಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜು. 31ರ ರಾತ್ರಿ ಮೆಣಸಿಗನಹಳ್ಳಿ ಹೇಮಂತ್ ಎಂಬಾತನನ್ನು ಕೊಲೆಗೈದ ಆರೋಪದಡಿ ಆಕಾಶ್ಗೆ ಪೊಲೀಸರು ಬಲೆ ಬೀಸಿದ್ದರು. ಈ ವೇಳೆ ಘಟನೆ ನಡೆದಿದೆ.
ಬೆಳಗ್ಗೆ ಆರೋಪಿ ಆಕಾಶ್ ಒಣಕನಹಳ್ಳಿಯ ಪಾಳುಬಿದ್ದ ಮನೆಯಲ್ಲಿ ಅಡಗಿದ್ದ ಬಗ್ಗೆ ಮಾಹಿತಿ ತಿಳಿದ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಮತ್ತು ಅವರ ತಂಡ, ಆರೋಪಿಯನ್ನು ಬಂಧಿಸಲು ಯತ್ನಿಸಿದ್ದು, ಆತ ಪೊಲೀಸ್ ಸಿಬ್ಬಂದಿ ಮಣಿಕಂಠ ಎಂಬವರ ಮೇಲೆ ಹಲ್ಲೆ ಮಾಡಿದ್ದ. ತಕ್ಷಣ ಎಚ್ಚೆತ್ತ ಸಬ್ಇನ್ಸ್ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಮಣಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಎಂ.ಎಲ್.ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, "ಇಂದು ಬೆಳಗ್ಗೆ ನಮಗೆ ಬಂದ ಖಚಿತ ಮಾಹಿತಿ ಮೆರೆಗೆ ಒಣಕನಹಳ್ಳಿಯ ಪಾಳುಬಿದ್ದ ಮನೆಯಲ್ಲಿ ಅಡಗಿದ್ದ ಆರೋಪಿ ಆಕಾಶ್‌ನನ್ನು ಬಂಧಿಸಲು ಸಬ್ಇನ್ಸ್ಪೆಕ್ಟರ್ ಪ್ರದೀಪ್ ಮತ್ತು ಅವರ ತಂಡ ತೆರಳಿದ್ದರು. ಈ ವೇಳೆ ಆರೋಪಿ ಏಕಾಏಕಿ ಕಾನ್ಸ್ಟೇಬಲ್ ಮಣಿಕಂಠ ಎಂಬುವವರ ಕೈಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಪಿಎಸ್ಐ ಆತನಿಗೆ ಎಚ್ಚರಿಕೆ ನೀಡಿದರೂ ಆತ ಕೇಳಲಿಲ್ಲ. ನಂತರ ಗಾಳಿಯಲ್ಲಿ ಗುಂಡು ಹಾರಿಸಿದರೂ ಕೇಳದೇ ಇದ್ದಾಗ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡನ್ನು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ತಿಳಿಸಿದರು.
ಆ್ಯಂಟಿ ರೌಡಿ ಸ್ಕ್ವಾಡ್ ರಚನೆ: "ಇದೇ ತಾಲೂಕಿನಲ್ಲಿ ರೌಡಿಸಂನಲ್ಲಿ ತೊಡಗಿಕೊಂಡಿದ್ದ ಸುಮಾರು ಹದಿನೈದಕ್ಕೂ ಹೆಚ್ಚು ಜನರನ್ನು ಗಡಿಪಾರು ಮಾಡಿದ್ದೇವೆ. ನಾಲ್ಕೈದು ಜನರ ಮೇಲೆ ಗೂಂಡಾ ಆ್ಯಕ್ಟ್ನಡಿ ಕ್ರಮ ಜರುಗಿಸಿದ್ದೇವೆ. ಮುಂದಿನ ದಿನಗಳಲ್ಲಿ ರೌಡಿಸಂ ಅನ್ನು ಕಡಿಮೆ ಮಾಡಲು ಆ್ಯಂಟಿ ರೌಡಿ ಸ್ಕ್ವಾಡ್ ರಚಿಸಲು ನಿರ್ಧಾರ ಮಾಡಿದ್ದೇವೆ. ಸದ್ಯದಲ್ಲೇ ಕಾರ್ಯರೂಪಕ್ಕೆ ತರುತ್ತೇವೆ. ಯಾರು ಕಾನೂನನ್ನು ಉಲ್ಲಂಘನೆ ಮಾಡುತ್ತಾರೋ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇವಿ" ಎಂದು ಹೇಳಿದರು.
ಇದನ್ನೂ ಓದಿ: 5 ಲಕ್ಷದ ಚೆಕ್ ಅನ್ನು 65 ಲಕ್ಷವೆಂದು ತಿದ್ದಿದ ಭೂಪ.. ಹಣ ಡ್ರಾ ಮಾಡುವಾಗ ತಗಲಾಕಿಕೊಂಡ ಖದೀಮ