ಬೆಂಗಳೂರು: ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತ್ನಿಯನ್ನು ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಬಾ ನಲ್ಲೆ ಮಧುಚಂದ್ರಕೆ ಚಿತ್ರದಂತೆ ಈ ಕೃತ್ಯ ಎಸಗಲಾಗಿದೆ. ಹೆಂಡತಿಯನ್ನು ಸಾಯಿಸುವುದಕ್ಕೆ ಪ್ಲಾನ್ ಮಾಡಿಕೊಂಡು ಅದರಲ್ಲಿ ಯಶಸ್ಸು ಸಹ ಕಂಡು ಕೊನೆಗೆ ಪೊಲೀಸರಿಗೆ ಆರೋಪಿ ಪೃಥ್ವಿರಾಜ್ ಸಿಕ್ಕಿಬಿದ್ದಿದ್ದಾನೆ.
ಘಟನೆಯ ವಿವರ: ಕಳೆದ 13 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಪೃಥ್ವಿರಾಜ್ ಎಂಬುವವ ಕಳೆದ ನವೆಂಬರ್ನಲ್ಲಿ ಬಿಕಾಂ ಪದವೀಧರೆಯಾಗಿದ್ದ ಜ್ಯೋತಿಯೊಂದಿಗೆ ವಿವಾಹವಾಗಿದ್ದಾನೆ. ಪತ್ನಿಯು ಯುಪಿಎಸ್ಸಿ ಪರೀಕ್ಷೆ ಬರೆದಿದ್ದಳು. ಆ ವೇಳೆ ಆಕೆಗೆ ಯುವಕನೋರ್ವನ ಪರಿಚಯವಾಗಿ ಇಬ್ಬರು ಚಾಟ್ ಮಾಡಲು ಶುರು ಮಾಡಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದ ಪತಿಗೆ ಆಕೆ ದಿನನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದಳಂತೆ. ಇದರಿಂದ ರೋಸಿ ಹೋಗಿದ್ದ ಪತಿ ಪತ್ನಿಯನ್ನು ಹತ್ಯೆ ಮಾಡಲು ಸ್ನೇಹಿತ ಸಮೀರ್‌ನೊಂದಿಗೆ ಪ್ಲಾನ್ ಮಾಡಿಕೊಂಡಿದ್ದಾನೆ.
ಆಗಸ್ಟ್ 2 ರಂದು ಪತ್ನಿಯನ್ನು ಟ್ರಿಪ್ಗೆ ಕರೆದೊಯ್ಯಲು ಜೂಮ್ ಕಾರ್ ಬುಕ್ ಮಾಡಿದ್ದ. ಬೆಂಗಳೂರಿನಿಂದ ಗಂಡ-ಹೆಂಡತಿ ಹಾಗೂ ಸಮೀರ್ ಕಾರಿನಲ್ಲಿ ಮಂಗಳೂರಿಗೆ ತೆರಳಿದ್ದರು. ಮೊದಲು ಮಲ್ಪೆಗೆ ಕರೆದೊಯ್ದು ಹೆಂಡತಿಯನ್ನು ಮುಳುಗಿಸಿ ನ್ಯಾಚುರಲ್ ಡೆತ್ ಎಂದು ಬಿಂಬಿಸಲು ಮುಂದಾಗಿದ್ದ. ಅಲ್ಲಿ ನೀರಿಗೆ ಇಳಿಯುವಂತಿಲ್ಲ ಎಂಬ ಬೋರ್ಡ್ ನೋಡಿದ ಬಳಿಕ ಪ್ಲಾನ್ ವಿಫಲ ಆಗಿತ್ತು.
ನಂತರ ನೇರವಾಗಿ ಶಿರಾಡಿ ಘಾಟ್ ರಸ್ತೆಯ ಮೂಲಕ ಗುಂಡ್ಯಾಗೆ ಬಂದು ಅಲ್ಲಿ ಆಕೆಯ ವೇಲ್ನಿಂದ ಉಸಿರುಗಟ್ಟಿಸಿ ಕೊಂದು ಹಾಕಿದ್ದಾನೆ. ನಂತರ ಜ್ಯೋತಿಯ ಶವವನ್ನು ಅಲ್ಲೇ ಬಿಸಾಕಿ ನಗರಕ್ಕೆ ಬಂದು ದೂರು ನೀಡಿದ್ದಾನೆ. ಇಷ್ಟೆಲ್ಲಾ ಕೃತ್ಯಕ್ಕೂ ಪೃಥ್ವಿರಾಜ್ ಹೊಸ ಮೊಬೈಲ್ ಹಾಗು ಸಿಮ್ ಬಳಕೆ ಮಾಡಿಕೊಂಡಿದ್ದಾನೆ.
ಹೆಂಡತಿ ಕಾಣೆಯಾಗಿದ್ದಾಳೆ: ಈ ಎಲ್ಲಾ ಘಟನೆ ನಡೆದ ನಂತರ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆ ತನಿಖೆ ವೇಳೆ ತನ್ನ ಮೊಬೈಲ್ ಮಾರುತಿ ನಗರದ ಮನೆಯಲ್ಲೇ ಇದೆ ಎಂಬ ವಿಷಯ ಬಾಯ್ಬಿಟ್ಟಿದ್ದ. ಸಂಶಯಗೊಂಡ ಪೊಲೀಸರು ಮೊಬೈಲ್ ಗಳ ಸಿಡಿಆರ್ ಹಾಗು ಸಿಸಿಟಿವಿ ಪರಿಶೀಲಿಸಿದಾಗ ಪೃಥ್ವಿರಾಜ್ ಪತ್ನಿ ಜೊತೆ ಹೊರ ಹೋಗಿರುವ ವಿಚಾರ ಗೊತ್ತಾಗಿದೆ. ನಂತರ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಹೆಂಡತಿ ಗಯ್ಯಾಳಿ: ಕೊಲೆಗೆ ಕಾರಣ ಕೇಳಿದಾಗ ಹಲವು ಸಂಗತಿ ಹೊರ ಬಿದ್ದಿದೆ. ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಜ್ಯೋತಿ ತನಗೆ ಸಾಕಷ್ಟು ಟಾರ್ಚರ್ ಕೊಡುತ್ತಿದ್ದಳು. ಅಷ್ಟೆ ಅಲ್ಲ ಆಕೆಗೆ ಪರ ಪುರುಷನ ಜೊತೆ ಸಂಪರ್ಕ ಇತ್ತು. ಕೇಳೊದಕ್ಕೆ ಹೋದ್ರೆ ತನ್ನ ಜೊತೆ ಗಯ್ಯಾಳಿಯಂತೆ ವರ್ತನೆ ಮಾಡುತ್ತಿದ್ದಳು. ಹೀಗಾಗಿ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ. ಈ ಘಟನೆ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 10 ವರ್ಷಗಳ ಹಿಂದಿನ ಮರ್ಡರ್ ಮಿಸ್ಟ್ರಿ ಭೇದಿಸಿದ ಪೊಲೀಸರು: ಬಾನಲ್ಲೇ ಮಧುಚಂದ್ರಕೆ ಸಿನಿಮಾ ಸ್ಟೈಲ್ನಲ್ಲೇ ಹತ್ಯೆ !