ಬೆಂಗಳೂರು : ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಡಿಕೇರಿ ಮೂಲದ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ಮೂಲದ ಮೊಹಮ್ಮದ್ ಕೈಫ್(26), ಸುಹೇಬ್ (30) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಇವರು ಮಡಿಕೇರಿಯ ಕಾಡಂಚಿನ ಭಾಗದಲ್ಲಿ ದಂತಚೋರನೊಬ್ಬನಿಂದ ಆನೆ ದಂತಗಳನ್ನು ಖರೀದಿಸಿ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲೆಂದು ನಗರಕ್ಕೆ ಬಂದಿದ್ದರು. ಅ.4ರಂದು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಡಿಎ ಕಾಂಪ್ಲೆಕ್ಸ್ ಬಳಿಯ ಲಾರಿ ನಿಲ್ದಾಣದಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಬಿ ಎನ್ ಲೋಹಿತ್ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಲಕ್ಷಾಂತರ ರೂ. ಮೌಲ್ಯದ ಎರಡು ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇಬ್ಬರೂ ಪದವೀಧರರು : ಬಂಧಿತ ಆರೋಪಿಗಳಿಬ್ಬರು ಪದವೀಧರರಾಗಿದ್ದಾರೆ. ಈ ಪೈಕಿ ಕೈಫ್ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸುಹೇಬ್ ಕೆಲಸ ಹುಡುಕುತ್ತಿದ್ದನು. ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಎಚ್ಚೆತ್ತುಕೊಂಡ BBMP: ರಾಜಧಾನಿಯ ಎಲ್ಲ ಕಟ್ಟಡಗಳ ಸರ್ವೆಗೆ ಕಮಿಷನರ್ ಸೂಚನೆ..!