ಬೆಂಗಳೂರು: ಬೀಗದ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಹಾಡಹಗಲೇ ಏಕಾಂಗಿಯಾಗಿ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿಬಂದು ಮತ್ತೆ ಕೈಚಳಕ ತೋರಿಸುತ್ತಿದ್ದ ಖ್ವಾಜಾ ಮೊಯಿದ್ದೀನ್ ಎಂಬಾತನನ್ನು ಬಂಧಿಸಿ 23 ಲಕ್ಷ ರೂಪಾಯಿ ಮೌಲ್ಯದ 523 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಸೆ.27ರಂದು ಆನಂದ್ ರಾವ್ ಸರ್ಕಲ್ ಬಳಿಯಿರುವ ಪೊಲೀಸ್ ಕ್ವಾರ್ಟರ್ಸ್ ನಿವಾಸಿಯಾಗಿರುವ ಹೆಡ್ಕಾನ್ಸ್ಟೇಬಲ್ ಮನೆಯಲ್ಲಿ ಈತ ಕಳ್ಳತನ ನಡೆಸಿದ್ದ. ಈ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಇನ್ಸ್ಪೆಕ್ಟರ್ ಎಂ.ಎಸ್ ರವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಈತನ ವಿರುದ್ಧ ಮಹದೇವಪುರ, ಜ್ಞಾನಭಾರತಿ, ಕೆ.ಎಸ್.ಲೇಔಟ್, ವೈಯ್ಯಾಲಿಕಾವಲ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು.
ಸುಲಭವಾಗಿ ಹಣ ಸಂಪಾದಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ಕಳ್ಳತನಕ್ಕಿಳಿದಿದ್ದ. ಬೀಗ ಹಾಕಿದ್ದ ಮನೆಯನ್ನೇ ಗುರಿಯಾಗಿಸಿಕೊಂಡು ಏಕಾಂಗಿಯಾಗಿ ಮನೆಗಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಶಿವಾಜಿನಗರ, ಚನ್ನಪಟ್ಟಣ ಹಾಗೂ ಗೋವಾದಲ್ಲಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಮೋಜು - ಮಸ್ತಿಗಾಗಿ ಬಳಸುತ್ತಿದ್ದ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಇದನ್ನೂ ಓದಿ: ಶಾಸಕ ಎಸ್ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣ: ಕುಳ್ಳ ದೇವರಾಜ್ ಬಂಧಿಸಿದ ಪೊಲೀಸರು