ಆನೇಕಲ್: ಸುತ್ತಮುತ್ತ ವ್ಯಾಪಕವಾಗಿ ಗಾಂಜಾ ಸರಬರಾಜಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ರವಿ ಚೆನ್ನಣ್ಣನವರ್ ಜಿಲ್ಲೆಗೆ ಕಾಲಿಟ್ಟ ಮೇಲೆ ಗಾಂಜಾ ಜಾಲದ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಈ ಹಿನ್ನೆಲೆ ಗಾಂಜಾ ಆರೋಪಿಯೋರ್ವನ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ.
ಡೇವಿಡ್ ಬಂಧಿತ ಆರೋಪಿ. ಈತ ಆಂಧ್ರದ ನೆಲ್ಲೂರಿನವನಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಾಂಜಾ ಜಾಲದ ಕಿಂಗ್ ಪಿನ್ ಎನ್ನಲಾಗಿದೆ. ಇಂದು ಗಾಂಜಾ ಸಾಗಣೆ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಆನೇಕಲ್ ತಾಲೂಕಿನ ಸೂರ್ಯಸಿಟಿ ಪೊಲೀಸರು, ಮರಸೂರು ಮಡಿವಾಳ ಬಳಿ ಈತನ ಸ್ಕಾರ್ಪಿಯೋ ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಡೇವಿಡ್ಗೆ ಶರಣಾಗುವಂತೆ ತಿಳಿಸಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನು ಕೇಳದ ಆತ ಪೊಲೀಸರ ಮೇಲೆಯೆ ದಾಳಿಗೆ ಮುಂದಾಗಿದ್ದಾನೆ.ಈ ಹಿನ್ನೆಲೆ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
ಡೇವಿಡ್ ಆನೇಕಲ್ನಲ್ಲಿ ಸುಮಾರು 10 ವರ್ಷಗಳಿಂದ ವಾಸವಾಗಿದ್ದಾನೆ ಎನ್ನಲಾಗಿದೆ. ಈತ ವಾಸವಿದ್ದ ಸ್ಥಳದಿಂದಲೇ ತನ್ನ ಜಾಲವನ್ನು ವಿಸ್ತರಿಸಿ ಗಾಂಜಾ ಮಾರಾಟ ಮಾಡುತ್ತಿದ್ದನಂತೆ.