ಬೆಂಗಳೂರು : ಕಳ್ಳತನ ಸೇರಿದಂತೆ ವಿವಿಧ ಅಪರಾಧ ನಡೆದಾಗ ಹಣ ವಸೂಲಿ ಮಾಡಬೇಕೆಂದು ಪೊಲೀಸರ ಬಳಿ ಹೋಗಬೇಡಿ. ಪೊಲೀಸರು ಮನಿ ರಿಕವರಿ ಏಜೆಂಟರಲ್ಲ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿ) ಇಂದು ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಪೊಲೀಸ್ ಠಾಣೆಗಳು ಸಿವಿಲ್ ವ್ಯಾಜ್ಯ ಇತ್ಯರ್ಥಗಳ ಕೇಂದ್ರವಾಗಿವೆ ಎಂದರು.
ಎಫ್‌ಕೆಸಿಸಿಐ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕಮೀಷನರ್, ಸಿವಿಲ್ ವ್ಯಾಜ್ಯಗಳಲ್ಲಿ ಭಾಗಿಯಾಗಕೂಡದು ಎಂದು ಪೊಲೀಸರಿಗೆ ಈಗಾಗಲೇ ತಾಕೀತು ಮಾಡಿದ್ದೇನೆ. ಸಾರ್ವಜನಿಕರು ಹಣ ವಸೂಲಿ ಮಾಡಿಕೊಡಿ ಎಂದು ಪೊಲೀಸ್ ಠಾಣೆಗಳ ಮೆಟ್ಟಿಲೇರಬೇಡಿ. ವಂಚನೆಯಾಗಿದ್ದರೆ ಆಯಾ ಪೊಲೀಸ್ ಠಾಣೆಗಳಿಗೆ ದೂರು ನೀಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ಸೈಬರ್ ಕ್ರೈಂ ಹೆಚ್ಚಳ: ಬೆಂಗಳೂರು ನಗರ ಸುರಕ್ಷಿತವಾಗಿದೆ. ಉದ್ಯಮ ವಲಯ ಸೇರಿದಂತೆ ನಗರದ ಎಲ್ಲ ವರ್ಗದ ಜನರಿಗೂ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಅಧಿಕವಾಗುತ್ತಿರುವುದು ಉದ್ಯಮವಲಯಕ್ಕೆ ಹೆಚ್ಚು ಆತಂಕಕಾರಿಯಾಗಿದೆ. ಡೇಟಾ ಕಳವು, ಆನ್ಲೈನ್ನಲ್ಲಿ ವಂಚನೆ ಸಂಬಂಧ ಎಲ್ಲ ರೀತಿಯ ಸೈಬರ್ ಕ್ರೈಂ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಇದರ ಸೈಬರ್ ಅಪರಾಧ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸೇಫ್ ಸಿಟಿ ಪ್ರಾಜೆಕ್ಟ್ ಅಡಿ ನಗರದ ಎಲ್ಲ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ 4000 ಸಾವಿರ ಕ್ಯಾಮರಾ ಅಳವಡಿಸಿದ್ದು, ಬಾಕಿ 3 ಸಾವಿರ ಅಳವಡಿಕೆ ಮಾಡಲಾಗುತ್ತದೆ. ಕೃತಕ ಬುದ್ದಿ ತಂತ್ರಜ್ಞಾನ (ಎಐ), ವಿವಿಧ ಹೈ ಟೆಕ್ನಾಲಜಿ ಕ್ಯಾಮರ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ನಿಗಾವಹಿಸಲು ಪ್ರತ್ಯೇಕ ಕಮಾಂಡ್ ಸೆಂಟರ್ ನಿರ್ಮಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ತಲೆ ಎತ್ತಲಿದೆ. ಇನ್ನೆರಡು ತಿಂಗಳಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್ ನಡಿ ಕೈಗೊಂಡಿರುವ ಕಾಮಗಾರಿ ಮುಕ್ತಾಯಗೊಳಿಸಲಾಗುವುದು. ದೇಶದಲ್ಲೇ ಸೇಫ್ ಸಿಟಿ ಯೋಜನೆ ಸಂಪೂರ್ಣ ಅನುಷ್ಠಾನಗೊಳಿಸುವಲ್ಲಿ ಬೆಂಗಳೂರು ಮೊದಲ ನಗರವಾಗಲಿದೆ ಎಂದು ಹೇಳಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿದ್ಯಾರ್ಥಿನಿಯರ ಕುರಿತು ಅವಹೇಳನಕಾರಿ ಪೋಸ್ಟ್: ಹು-ಧಾ ಪೊಲೀಸ್ ಕಮಿಷನರ್ ಹೇಳಿದ್ದೇನು?
ಅಡ್ಡಾದಿಡ್ಡಿ ವಾಹನ ನಿಲುಗಡೆ ವಿಚಾರ: ನಗರದ ಪಾದಚಾರಿ ಮಾರ್ಗಗಳ ಒತ್ತುವರಿ ವಿಚಾರ, ನಿಯಮಾವಳಿ ಪ್ರಕಾರವೇ ಪುಟ್ಪಾತ್ ತೆರವು ಮಾಡಲಾಗುತ್ತಿದೆ. ಹೈಕೋರ್ಟ್ ಆದೇಶ ಪ್ರಕಾರವೇ ತೆರವು ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಸಹಕಾರ ನೀಡಬೇಕಿವೆ ಎಂದರು. ಕೆ. ಆರ್ ಮಾರುಕಟ್ಟೆಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಕಳೆದ ಮೂರು ವಾರಗಳಿಂದ ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡಿರುವುದು ಅಥವಾ ಬೀದಿಬದಿ ವ್ಯಾಪಾರಿಗಳಿಂದ ಒತ್ತುವರಿ ಮಾಡಿಕೊಳ್ಳಲಾಗಿದ್ದ ಅಂಗಡಿಗಳನ್ನ ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.